ಮೂಡಿಗೆರೆ : ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘ ಬೆಂಗಳೂರು ಇವರ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಘಟಕ ಸ್ಥಾಪನೆ ಕಾರ್ಯಕ್ರಮ ಇಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಸವಳಲು ಗ್ರಾಮದ ರಾಘವೇಂದ್ರರವರ ಫಾರಂಹೌಸ್‍ನಲ್ಲಿ ನಡೆಯಿತು. ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮ ಅಧ್ಯಕ್ಷ ಎ.ಎನ್.ಮಹೇಶ್, ಸುದ್ದಿ ನೀಡುವ ಧಾವಂತ ಹಾಗೂ ಪ್ರಸರಣಗಳ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳುವ ಆತುರದಲ್ಲಿ ಸತ್ಯ ಸುದ್ದಿ ಮರೆಯಾಗುವ ಕಾಲ ಬಂದಿದೆ. ಒಂದು ಸುದ್ದಿ ಒಬ್ಬರಿಗೆ ಸಂತೋಷ ನೀಡಿದರೆ ಮತ್ತೊಬ್ಬರಿಗೆ ಬೇಸರ ತರಿಸುತ್ತೆ. ಆದ್ದರಿಂದ ಸುದ್ದಿ ನೀಡುವ ಮುನ್ನ ಘಟನೆಯ ಎಲ್ಲಾ ಮಜುಲುಗಳಿಂದ ಸತ್ಯ ಸುದ್ದಿಯನ್ನೇ ನೀಡಿ ಎಂದು ಪತ್ರಕರ್ತರಿಗೆ ಕಿವಿ ಮಾತು ಹೇಳಿದ್ರು.
ಇದೇ ವೇಳೆ, ನಗರಾಭಿವೃದ್ಧೀ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಪತ್ರಕರ್ತರು ಬೌದ್ಧಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಕೆಲ ವಾರ ಹಾಗೂ ಪಾಕ್ಷಿಕ ಪತ್ರಿಕೆಗಳ ಪರಿಸ್ಥಿತಿಯನ್ನ ಬಿಚ್ಚಿಟ್ಟರು. ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಸರ್ಕಾರದ ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನ ಬಳಸಿಕೊಂಡು ಪ್ರತಿಯೊಬ್ಬ ಪತ್ರಕರ್ತರು ಕೂಡ ಬೌದ್ಧಿಕ ಹಾಗೂ ಆರ್ಥಿಕವಾಗಿ ಸದೃಢವಾಗಬೇಕು ಎಂದು ಸಲಹೆ ನೀಡಿದ್ರು. ಇದೇ ವೇಳೆ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಸರ್ಕಾರದಿಂದ ಸಣ್ಣ ಪತ್ರಿಕೆಗಳು, ಪತ್ರಕರ್ತರು ಹಾಗೂ ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಇರೋ ಸೌಲಭ್ಯವನ್ನ ತಿಳಿಸೋದ್ರ ಜೊತೆ, ಪತ್ರಕರ್ತರಿಗೆ ಸರ್ಕಾರದಿಂದ ಬಸ್ ಪಾಸ್ ಸೌಲಭ್ಯ ಸೇರಿದಂತೆ ಹಲವು ಕಾರ್ಯಕ್ರಮಗಳಿವೆ ಎಂದು ಸೌಲಭ್ಯಗಳ ವಿವರಣೆ ನೀಡಿದರು. ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಪತ್ರಿಕೋಧ್ಯಮದ ಅಗತ್ಯತೆಯನ್ನ ತಿಳಿಸಿದ್ರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದ ಎಂ.ಎಸ್.ಮಣಿ, ಉಪಾಧ್ಯಕ್ಷ ಮಂಜುನಾಥ್ ಬೊಮ್ಮನಕಟ್ಟಿ, ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಮಹಮದ್, ಪ್ರಧಾನ ಕಾರ್ಯದರ್ಶಿ ವೆಂಕಟಸಿಂಗ್, ಕಾರ್ಯದರ್ಶಿ ಕಲಾವಿದ ವಿಷ್ಣು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯಕುಮಾರ್, ಜಿಲ್ಲಾ ವರದಿಗಾರ ಪತ್ರಿಕೆ ಉಪಸಂಪಾದಕ ರಾಘವೇಂದ್ರ ಕೆಸವಳಲು, ಬಿಜೆಪಿ ಮುಖಂಡ ಜನ್ನಾಪುರ ರಘು, ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಕೊಟ್ಟಿಗೆಹಾರ ಸಂಜಯ್, ಜಿಲ್ಲಾ ಪಂಚಾಯತ್ ಸಹಾಯಕ ಅಭಿಯಂತರರಾದ ಹುಲಿಯಪ್ಪಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 150ಕ್ಕೂ ಹೆಚ್ಚು ಪತ್ರಕರ್ತರು ಆಗಮಿಸಿದ್ದರು. ಎಂ.ಎಸ್. ಉಮೇಶ್ ಕುಮಾರ್ ಸ್ವಾಗತಿಸಿದರು. ಜಯಕುಮಾರ್ ವಂದನಾರ್ಪಣೆ ಸಲ್ಲಿಸಿದರು.










