ಚಿಕ್ಕಮಗಳೂರು : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದೆ. ಒಂದೊಂದು ಪಕ್ಷ ಒಂದೊಂದು ದಿಕ್ಕಿನಿಂದ ಚುನಾವಣಾ ಪ್ರಚಾರ, ರ್ಯಾಲಿ, ಸಮಾವೇಶ ಅಂತೆಲ್ಲಾ ಜಿದ್ದಾಜಿದ್ದಿಗೆ ಬಿದ್ದಿದ್ರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಣ್ಣು ಕಾಫಿನಾಡು ಚಿಕ್ಕಮಗಳೂರಿನ ಮೇಲೆ ಬಿದ್ದಿದೆ. ನವಂಬರ್ ಏಳರ ಮಂಗಳವಾರದಂದು ಮೈಸೂರಿನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿರೋ ಕುಮಾರಸ್ವಾಮಿ, ಅಂದೇ ಚಿಕ್ಕಮಗಳೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಚುನಾವಣಾ ಅಖಾಡಕ್ಕೆ ಜಿಗಿಯಲಿದ್ದಾರೆ.
2018ರ ವಿಧಾನಸಭಾ ಚುನಾವಣೆಗೆ ಆರು ತಿಂಗಳಿರುವಾಗಲೇ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ತಯಾರಿ ಭರದಿಂದ ಸಾಗ್ತಿದೆ. ಮನೆ-ಮನೆ ಕಾಂಗ್ರೆಸ್, ನವಕರ್ನಾಟಕ ಯಾತ್ರೆ ಅಂತ ರಾಷ್ಟ್ರೀಯ ಪಕ್ಷಗಳು ಊರೂರು ಸುತ್ತುತ್ತಿದ್ರೆ, ನಾವೇನು ಕಮ್ಮಿ ಎಂಬಂತೆ ಮಾಜಿ ಸಿಎಂ ಕುಮಾರಸ್ವಾಮಿ ಸೆಡ್ಡು ಹೊಡಿದಿದ್ದಾರೆ. ನವೆಂಬರ್ ಏಳರಂದು ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ ನೀಡಲಿರೋ ಕುಮಾರಸ್ವಾಮಿ ಅಂದೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮುಗುಳುವಳ್ಳಿಯ ದಲಿತ ಕುಟುಂಬ ಧರ್ಮಪಾಲ್ ಮನೆಯಲ್ಲಿ ಗ್ರಾಮ ವಾಸ್ತವ್ಯ ನಡೆಸುವ ಮೂಲಕ ಚುನಾವಣಾ ರಣಕಹಳೆ ಊದಲಿದ್ದಾರೆ. ಚಿಕ್ಕಮಗಳೂರಿನಿಂದಲೇ ಚುನಾವಣಾ ಪ್ರಚಾರ ಆರಂಭಿಸಲಿರೋ ಕುಮಾರಸ್ವಾಮಿ, ಗ್ರಾಮ ವಾಸ್ತವ್ಯದ ಮೂಲಕ ಮತದಾರರನ್ನ ಜೆಡಿಎಸ್‍ನತ್ತ ಸೆಳೆಯಲು ರಣತಂತ್ರ ರೂಪಿಸಿದ್ದಾರೆ.
ನವೆಂಬರ್ 7 ರಂದು ಮೈಸೂರಿನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ ನೀಡಲಿರೋ ಮಾಜಿ ಸಿಎಂ ಕುಮಾರಸ್ವಾಮಿ ಹಾಸನ ಮಾರ್ಗವಾಗಿ ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ನಗರದ ಆಜಾದ್ ವೃತ್ತದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಲಿರೋ ಕುಮಾರಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನ ಜನರ ಮುಂದಿಡಲಿದ್ದಾರೆ. ತದನಂತರ ಮಂಗಳವಾರ ರಾತ್ರಿ ಮುಗುಳುವಳ್ಳಿಯ ದಲಿತ ಕುಟುಂಬ ಧರ್ಮಪಾಲ್ ಮನೆಯಲ್ಲಿ ಊಟ ಮಾಡಿ ವಾಸವ್ಯ ಹೂಡಲಿದ್ದಾರೆ. ಮರುದಿನ ಅಲ್ಲಿಂದ ತರೀಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಸಿ ಅಲ್ಲಿಂದ ಶಿವಮೊಗ್ಗ ತೆರಳಲಿದ್ದಾರೆ. ಹೆಚ್‍ಡಿಕೆ ಬರ್ತಾರೆಂದು ಧರ್ಮಪಾಲ್ ಮನೆಯಲ್ಲಿ ಸಕಲ ಸಿದ್ಧತೆ ನಡೆದಿದ್ದು ಗ್ರಾಮಸ್ಥರು ಹಾಗೂ ಧರ್ಮಪಾಲ್ ಮನೆಯಲ್ಲಿ ಸಂತಸ ಮನೆಮಾಡಿದೆ.
ಒಟ್ಟಾರೆ, ಕಾಫಿನಾಡು ಚಿಕ್ಕಮಗಳೂರು ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಜಿಲ್ಲೆ. ಅಂತಹಾ ವಿಶೇಷ ರಾಜಕೀಯ ಇತಿಹಾಸವಿರೋ ಕಾಫಿನಾಡಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯುತ್ತಿರೋದು, ರಾಜಕೀಯ ಪಂಡಿತರ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಈ ಬಾರಿ ಚಿಕ್ಕಮಗಳೂರನ್ನ ಅದೃಷ್ಟ ಪರೀಕ್ಷೆಗೆ ಆಯ್ಕೆ ಮಾಡಿಕೊಂಡ್ರಾ ಎಂಬ ಅನುಮಾನ ಹುಟ್ಟಾಕಿದೆ.