ನವೆಂಬರ್ 3 ರಂದು ರಾಜ್ಯಾದ್ಯಂತ ಖಾಸಗೀ ಆಸ್ಪತ್ರೆಯ ವೈದ್ಯರು ಸಿಗೋದು ಡೌಟು, ಯಾಕೆ ಗೊತ್ತಾ ?

512

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ (ಕೆಪಿಎಂಇ) ಕಾಯಿದೆ ಯಥಾವತ್ ಜಾರಿಗೆ ತರುವುದನ್ನು ವಿರೋಧಿಸಿ ನ.3ರಂದು ರಾಜ್ಯಾದ್ಯಂತ ಎಲ್ಲಾ ಖಾಸಗಿ ವೈದ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಒಂದು ದಿನ ಮುಷ್ಕರ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ. ಮಾರಕ ಡೆಂಗೆ, ಚಿಕೂನ್ ಗುನ್ಯಾ, ವೈರಲ್ ಜ್ವರ ಉಲ್ಬಣಗೊಂಡು ರಾಜ್ಯಾದ್ಯಂತ ಲಕ್ಷಾಂತರ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೇ ಅತಿ ಹೆಚ್ಚಿನ ಮಂದಿ ಚಿಕಿತ್ಸೆ ಪಡೆಯುತ್ತಿರುವುದರಿಂದ ವೈದ್ಯರ ಮುಷ್ಕರದಿಂದ ಆರೋಗ್ಯ ಸೇವೆಯಲ್ಲಿ ಏರುಪೇರಾದರೆ ಸಮಸ್ಯೆ ಸೃಷ್ಟಿಯಾಗುವ ಅಪಾಯವಿದೆ.

ಸರಕಾರ ಜಾರಿಗೆ ತರಲು ಹೊರಟಿರುವ ಕಾಯಿದೆಯಲ್ಲಿ ಕರಾಳ ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಯಾವುದೇ ಸೇವೆ ನೀಡುವುದಿಲ್ಲ. ಇದರಿಂದ ಮುಂದಾಗುವ ಅನಾಹುತಕ್ಕೆ ಸರಕಾರವೇ ನೇರ ಹೊಣೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎಚ್.ಎನ್. ರವೀಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸೂಪರ್ ಸ್ಪೆಷಾಲಿಟಿ, ಖಾಸಗಿ ನರ್ಸಿಂಗ್ ಹೋಮ್, ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿರುವ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ತಿದ್ದುಪಡಿ ಕಾಯಿದೆ ಜಾರಿಗೆ ಬದಲಾಗಿ, ಸರಕಾವೇ ರಚಿಸಿದ್ದ ನ್ಯಾ. ವಿಕ್ರಮ್ಜಿತ್ ಸೇನ್ ಸಮಿತಿಯ ವರದಿ ಯಥಾವತ್ ಜಾರಿಗೆ ತರಲಿ. ರೋಗಿಗಳ ಸಮಸ್ಯೆ ಆಲಿಸಿ ನ್ಯಾಯ ಒದಗಿಸಲು ಹೊಸದಾಗಿ ಕುಂದು ಕೊರತೆ ಪರಿಹಾರ ಸಮಿತಿ ರಚಿಸುವ ಅಗತ್ಯವಿಲ್ಲ. ಜೈಲು ಶಿಕ್ಷೆ, ದಂಡಗಳ ಭಯದಿಂದ ತುರ್ತು ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾನೂನು ವೈದ್ಯರಿಗಷ್ಟೇ ಅಲ್ಲದೆ, ರೋಗಿಗಳು ಹಾಗೂ ಅವರ ಕುಟುಂಬಸ್ಥರ ಮೇಲೂ ತೀವ್ರತರವಾದ ಪರಿಣಾಮ ಬೀರಲಿದೆ. ಹೀಗಾಗಿ ಇಂತಹ ನಿಲುವಿನಿಂದ ಹಿಂದೆ ಸರಿಯಬೇಕು. ಖಾಸಗಿ ಆಸ್ಪತ್ರೆಗಳ ಸೇವೆಯ ಕುರಿತು ದರ ನಿಗದಿ ಪಡಿಸುವ ತೀರ್ಮಾನ ಕೈಗೊಂಡು ಆಸ್ಪತ್ರೆಗಳ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅದನ್ನು ಬಿಟ್ಟು, ಕೇರಳ ಸರಕಾರ ಮಾದರಿಯಲ್ಲಿ ಕೇಂದ್ರದ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ ಜಾರಿಗೆ ತಂದು, ಸರಕಾರಿ ಆಸ್ಪತ್ರೆಗಳನ್ನೂ ಕಾಯಿದೆ ವ್ಯಾಪ್ತಿಗೆ ತರಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

LEAVE A REPLY

Please enter your comment!
Please enter your name here