ಚಿಕ್ಕಮಗಳೂರು : ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ವೈಯಕ್ತಿಕ ಮಾಹಿತಿಗಳನ್ನು ನೀಡಲು ಅವಕಾಶವಿರುವುದಿಲ್ಲ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಡಾ|| ಸುಚೇತನ ಸ್ವರೂಪ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ಜೊತೆ ಮಾಹಿತಿ ಹಕ್ಕು ಅಧಿನಿಯಮ-೨೦೦೫ರ ಕುರಿತು ಮಾತನಾಡಿದರು.
ಅರ್ಜಿದಾರರು ಬೇರೊಬ್ಬರಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಗಳನ್ನು ಕೇಳಿದರೆ ಅದನ್ನು ನೀಡಲು ಬರುವುದಿಲ್ಲ. ವ್ಯಕ್ತಿಯೊಬ್ಬನ ಶಾಲಾ ದಾಖಲಾತಿ, ಆತನ ಜಾತಿ ಪ್ರಮಾಣ ಪತ್ರ, ನೌಕರರ ಸೇವಾ ವಹಿ, ವೇತನ ಕುರಿತ ಮಾಹಿತಿಯನ್ನು ನೀಡುವಂತಿಲ್ಲ, ಆದರೆ ನೌಕರನ ಒಂದು ತಿಂಗಳ ವೇತನದ ವಿವರವನ್ನಷ್ಟೇ ನೀಡಬಹುದು ಎಂದು ಹೇಳಿದರು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೋರಿದ ಮಾಹಿತಿಯನ್ನಷ್ಟೇ ನೀಡಬಹುದಾಗಿದ್ದು, ಬೇರೆ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು ಅರ್ಜಿದಾರರು ಪ್ರತ್ಯೇಕ ಅರ್ಜಿಯ ಮೂಲಕ ಸಂಬಂಧಿಸಿದ ಇಲಾಖೆಗೆ ಸಲ್ಲಿಸಬೇಕು ಎಂದ ಅವರು ಅರ್ಜಿದಾರರು ಸಲ್ಲಿಸಿದ ಒಂದೇ ಅರ್ಜಿಯನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಲು ಅವಕಾಶವಿಲ್ಲ ಮತ್ತು ಮಾಹಿತಿಯನ್ನು ಸಂಗ್ರಹಿಸಿ ಕ್ರೂಢೀಕರಿಸಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಅರ್ಜಿದಾರರು ಮಾಹಿತಿಯನ್ನು ನೀಡುವಂತೆ ಮನವಿ ಮಾಡಬಹುದೇ ಹೊರತು ಸ್ಪಷ್ಟನೆ ಮತ್ತು ಪ್ರಶ್ನೆಯ ಮೂಲಕ ಕೇಳುವಂತಿಲ್ಲ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಿ ಅರ್ಜಿ ಸಲ್ಲಿಸಿದಾಗ ಪ್ರಕರಣ ತನಿಖಯ ಹಂತದಲ್ಲಿದ್ದರೆ ಮಾಹಿತಿ ನೀಡಲು ಅವಕಾಶವಿರುವುದಿಲ್ಲ, ಆದರೆ ಅರ್ಜಿದಾರನು ತನಿಖೆಗೆ ಒಳಪಟ್ಟಿರುವಾಗ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದರು. ಅರ್ಜಿದಾರನು ಕೇಳಿದ ಮಾಹಿತಿಯನ್ನು ನೀಡಲು ಮಾಹಿತಿ ಪ್ರಾಧಿಕಾರಿಗಳಿಗೆ ಕಾನೂನಿನ ತೊಡಕಾಗಿದ್ದರೆ ಅರ್ಜಿಗೆ ಹಿಂಬರಹವನ್ನು ಒದಗಿಸಬೇಕು ಎಂದ ಅವರು ಮಾಹಿತಿ ನೀಡದೆ ಅರ್ಜಿದಾರರಿಗೆ ಎಷ್ಟು ಪುಟಗಳಾಗುತ್ತವೆ ಎಂಬುದರ ಕುರಿತು ಪುಟ ಒಂದಕ್ಕೆ ಎರಡು ರೂ. ನಂತೆ ಮಾಹಿತಿ ನೀಡಬೇಕು ನಂತರ ಅವರು ಹಣ ಪಾವತಿಸಿದ ಮೇಲೆ ಕೋರಿರುವ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದನ್ವಯ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ತೊಂದರೆ ಕೊಡುವ ಅಥವಾ ತೇಜೋವಧೆ ಮಾಡುವ ಉದ್ದೇಶದಿಂದ ಸಾಕಷ್ಟು ಅರ್ಜಿಗಳನ್ನು ಪದೇ ಪದೇ ಸಲ್ಲಿಸುತ್ತಿದ್ದರೆ ಅದನ್ನು ನಿರ್ಬಂಧಿಸಲು ಮಾಹಿತಿ ಹಕ್ಕಿನಲ್ಲಿ ಅವಕಾಶವಿದೆ ಎಂದ ಅವರು ಅರ್ಜಿದಾರರು ಮಾಹಿತಿ ಕೋರುವ ಸಂದರ್ಭದಲ್ಲಿ ಅವ್ಯಾಚ್ಯ ಶಬ್ಧಗಳನ್ನು ಬಳಸಿದರೆ ಇದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಎಂದರು. ಮಾಹಿತಿಯನ್ನು ಪಡೆಯಲು ಜನರು ಯಾವುದೇ ಹಿಂಜರಿಕೆ ಇಲ್ಲದೆ ನಿಯಮದ ಪ್ರಕಾರ ಅರ್ಜಿ ಸಲ್ಲಿಸಬಹುದಾಗಿದ್ದು, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಾನೂನು ಪಾಲಿಸುವ ಜೊತೆಗೆ ಕಾರ್ಯಾಂಗದ ಘನತೆಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.
ಪ್ರತಿ ಇಲಾಖೆಯ ಮೇಲ್ಮನವಿ ಅಧಿಕಾರಿಗಳು ತಿಂಗಳಿಗೊಮ್ಮೆ ಸಭೆ ಸೇರಿ ಮಾಹಿತಿ ಕೋರಿ ಬಂದಿರುವ ಅರ್ಜಿಗಳನ್ನು ವಿಲೇ ಮಾಡಲು ಕ್ರಮವಹಿಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ವಿಚಾರಣೆ ನಡೆಸಿ, ಕೆಲವು ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ಸಂಗಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿರಿದ್ದರು.