ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದ ಗಡಿ ಕಾಯುವ ಯೋಧರೊಂದಿಗೆ ಆಚರಿಸಿದರು. ಜಮ್ಮು-ಕಾಶ್ಮೀರದ ಗುರೇಜ್ ಕಣಿವೆಯಲ್ಲಿ ದೇಶದ ಸೈನಿಕರಿಗೆ ಸಿಹಿ ತಿನ್ನಿಸಿ ಪ್ರಧಾನಿ ದೀಪಾವಳಿ ಹಬ್ಬ ಆಚರಿಸಿದರು. ತಾವು ಪ್ರಧಾನಿ ಆದಗಿನಿಂದಲೂ ಮೋದಿ ಯೋಧರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. 2014ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಉಂಟಾದ ಸಮಯದಲ್ಲಿ ಮೋದಿ ಯೋಧರೊಂದಿಗೆ ದೀಪಾವಳಿ ಅಚರಿಸಿದ್ದರು. ನಂತರ 2015ರಲ್ಲಿ ಪಂಜಾಬ್‌ನ ಭಾರತ-ಪಾಕಿಸ್ತಾನದ ಗಡಿ ಪ್ರದೇಶಕ್ಕೆ ತೆರಳಿ ಪ್ರಧಾನಿ ಮೋದಿ ದೀಪಾವಳಿ ಆಚರಿಸಿದ್ದರು. 2016ರಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಪ್ರಧಾನಿ ಮೋದಿ ಅಲ್ಲಿ ಯೋಧರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದ್ದರು.
ಈ ವರ್ಷ ಕೂಡ ಪ್ರಧಾನಿ ಮೋದಿ ಗಡಿ ಕಾಯುವ ಯೋಧರೊಂದಿಗೆ ಆಚರಿಸಿದ್ದಾರೆ. ಇಂದು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಗುರೇಜ್ ಕಣಿವೆಯ ಸೇನಾ ಕ್ಯಾಂಪ್‌ಗೆ ತೆರಳಿದರು. ಅಲ್ಲಿ ಸೈನಿಕರಿಗೆ ಸಿಹಿ ತಿನ್ನಿಸಿ ಪ್ರಧಾನಿ ದೀಪಾವಳಿ ಹಬ್ಬ ಆಚರಿಸಿದರು. ಈ ವೇಳೆ ಪ್ರಧಾನಿ ಯೋಧರ ಸಮವಸ್ತ್ರ ತೊಟ್ಟಿದ್ದು ವಿಶೇಷವಾಗಿತ್ತು. ಪ್ರಧಾನಿ ಮೋದಿ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಉತ್ತರ ಕಮ್ಯಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದೇವರಾಜ್ ಅಂಬು, ಚಿನಾರ್ ಕ್ರಾರ್ಪ್ಸ್ ಕಮ್ಯಾಂಡರ್ ಲೆಫ್ಟಿನೆಂಟ್ ಜನರಲ್ ಜೆಎಸ್ ಸಂಧು ಸಾಥ್ ನೀಡಿದರು.










