ಚಿಕ್ಕಮಗಳೂರು – ಮೊಬೈಲ್, ಫೇಸ್‍ಬುಕ್, ಕಂಪ್ಯೂಟರ್ ಮತ್ತು ಇಂಟರ್ ನೆಟ್ ಯುಗದಲ್ಲಿ ಬಾಗಿಲು ಹಾಕುವ ಸ್ಥಿತಿ ತಲುಪಿದ್ದ ದೇಶದ ಅಂಚೆ ಇಲಾಖೆಗೆ ಜನಪರ ಯೋಜನೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಲಾಖೆಯನ್ನು ಬಲಾಡ್ಯಗೊಳಿಸಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.ವಿಭಾಗೀಯ ಅಂಚೆ ಇಲಾಖೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.ಕಳೆದ 160 ವರ್ಷಗಳಿಂದ ದೇಶದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಅಂಚೆ ಇಲಾಖೆ ಕಂಪ್ಯೂಟರ್, ಮೊಬೈಲ್, ಫೇಸ್‍ಬುಕ್, ಇಂಟರ್‍ನೆಟ್ ಯುಗದಿಂದಾಗಿ ಬಾಗಿಲು ಹಾಕುವ ಸ್ಥಿತಿಗೆ ತಲುಪಿತ್ತು, ಕೇಂದ್ರ ಸರ್ಕಾರದ ಟಾಸ್ಕ್ ಪೋರ್ಸ್ ಸಮಿತಿ ಸಹ ಅಂಚೆ ಇಲಾಖೆಯ ಅವಶ್ಯಕತೆ ಇನ್ನಿಲ್ಲ ಎನ್ನುವ ವರದಿಯನ್ನು ನೀಡಿತ್ತು, ಅದನ್ನು ಸಶಕ್ತಗೊಳಿಸುವ ಕುರಿತು ಚಿಂತನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸುಕನ್ಯಾ ಸಮೃದ್ದಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಇಲಾಖೆಗೆ ಸೇರ್ಪಡೆಗೊಳಿಸುವ ಮೂಲಕ ಸಶಕ್ತಗೊಳಿಸಿದರು ಎಂದರು.ಇದೀಗ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕನ್ನು ಅಂಚೆ ಇಲಾಖೆಗೆ ಸೇರ್ಪಡೆಗೊಳಿಸುವ ಮೂಲಕ ಮತ್ತೊಂದು ಕ್ರಾಂತಿಕಾರಿ ಯೋಜನೆಯನ್ನು ಪ್ರಧಾನಿಯವರು ಆರಂಭಿಸಿದ್ದಾರೆ ಎಂದ ಅವರು ಈ ಮೊಬೈಲ್ ಬ್ಯಾಂಕಿಂಗ್ ಯೋಜನೆಯಿಂದಾಗಿ ಅಂಚೆಯಣ್ಣ ಅಥವಾ ಅಂಚೆಯ ಅಕ್ಕ ಬರೀ ಪತ್ರ ತರುವ ಕೆಲಸ ಮಾಡುವುದಿಲ್ಲ ಅದರ ಜೊತೆಗೆ ಹಣವನ್ನೂ ಮನೆ ಬಾಗಿಲಿಗೆ ತಲುಪಿಸುತ್ತಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಚೆ ಅಧೀಕ್ಷಕ ಜಿ.ಸಿ.ಶ್ರೀನಿವಾಸ್ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಂಚೆ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಂದು ದೆಹಲಿ ಶಾಖೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅದನ್ನು ಉದ್ಘಾಟಿಸುತ್ತಾರೆ ಎಂದರು.ಇದೇ ವೇಳೆ ದೇಶಾದ್ಯಂತ ನೂತನ ಬ್ಯಾಂಕಿನ 650 ಶಾಖೆಗಳು ಮತ್ತು 3250 ಅಕ್ಸೆಸ್ ಪಾಯಿಂಟ್‍ಗಳು ಉದ್ಘಾಟನೆಗೊಳ್ಳುತ್ತಿವೆ ರಾಜ್ಯದಲ್ಲಿ 31 ಶಾಖೆ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ನಗರದ ಪ್ರಧಾನ ಅಂಚೆ ಕಛೇರಿ, ರಾಮನಹಳ್ಳಿ, ಕಬ್ಬಿನಹಳ್ಳಿ, ಕರ್ತಿಕೆರೆ, ಮುಗುಳುವಳ್ಳಿಯಲ್ಲಿ ಸೇವೆ ಆರಂಭಗೊಳ್ಳುತ್ತಿದೆ ಎಂದರು.ಸಾಮಾನ್ಯ ಜನರಿಗೆ ಎಟುಕುವ ಹಾಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದ್ದು, ಇದರಲ್ಲಿ ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣ ಪಾವತಿ ಮತ್ತು ವರ್ಗಾವಣೆ, ಸಾಮಾಜಿಕ ಭದ್ರತಾ ಯೋಜನೆಗಳ ಭತ್ಯೆಗಳನ್ನು ಖಾತೆಗಳ ಮೂಲಕ ನಿರ್ವಹಣೆ, ಆರ್.ಟಿ.ಜಿ.ಎಸ್ ಹಾಗೂ ನೆಫ್ಟ್‍ನಂತಹ ಆನ್‍ಲೈನ್ ಪಾವತಿ ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದರು.ಈಗಾಗಲೇ ಕೇವಲ 10 ದಿನಗಳಲ್ಲಿ ಜಿಲ್ಲೆಯಲ್ಲಿ 5659 ಖಾತೆ ತೆರೆಯಲಾಗಿದೆ ಎಂದು ಹೇಳಿದರು, ಇದೇ ವೇಳೆ ಕ್ವಿಕ್ ರೆಸ್ಪಾನ್ಸ್ ಕಾರ್ಡ್‍ಗಳನ್ನು ಗ್ರಾಹಕರಿಗೆ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ ಅನಿಲ್‍ಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ಜಿ.ಪಂ.ಸದಸ್ಯರಾದ ಸೋಮಶೇಖರ್, ರವೀಂದ್ರ ಬೆಳವಾಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ, ಸದಸ್ಯ ಸುರೇಶ್ ಉಪಸ್ಥಿತರಿದ್ದರು.ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು, ಐ.ಪಿ.ಪಿ.ಬಿ ಬ್ಯಾಂಕ್‍ನ ವ್ಯವಸ್ಥಾಪಕ ಪ್ರವೀಣ್ ಸ್ವಾಗತಿಸಿದರು, ಸಹಾಯಕ ಅಂಚೆ ಅಧೀಕ್ಷಕ ಎನ್.ರಮೇಶ್ ವಂದಿಸಿದರು.