- ರಾಘವೇಂದ್ರ ಕೆಸವಳಲು
ಸಂಪಾದಕ ಫಸ್ಟ್ ಸುದ್ದಿ ನ್ಯೂಸ್
ಮೂಡಿಗೆರೆ : ಡಾ. ಜೀವ (ಹೆಸರು ಬದಲಿಸಿದೆ). ಕಳೆದ ಎರಡ್ಮೂರು ದಿನಗಳಿಂದ ಮಲೆನಾಡನ್ನೇ ತಲ್ಲಣಗೊಳಿಸುತ್ತಿರುವ ಹೆಸರು. ಕೊರೋನ ಬಂತಂತೆ… ಕೊರೋನ ಬಂತಂತೆ ಅಂತ ಬಾಯಿ ಬಡಿದುಕೊಳ್ಳುತ್ತಿರುವವರೆ ಹೆಚ್ಚು. ಆದರೆ ನೆನಪಿಡಿ, ಆತ ಬರೀ ವೈದ್ಯನಲ್ಲ. ಡಾ. ಜೀವ ಅಂದರೆ ಮಲೆನಾಡಿಗರು ತಮ್ಮ ಶರ್ಟ್ ಕಾಲರ್ ಮೇಲೆತ್ತಿಕೊಂಡು “ಅವ ನಮ್ಮವ” ಎಂದು ಬೀಗಬೇಕಾದ ವ್ಯಕ್ತಿ, ವ್ಯಕ್ತಿತ್ವ ಡಾ.ಜೀವದ್ದು. ಸುಮ್ಮನೆ, ಬರಬಾರದ್ದೇನೋ ಬಂದಿದೆ, ಆಗಬಾರದ್ದೇನೋ ಆಗಿದೆ ಅಂತ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತೆ ವರ್ತಿಸೋದು ನಮ್ಮವನ ಮೇಲೆ ನಮ್ಮವರೇ ಮಾಡಿದ ದ್ರೋಹ ಅಲ್ಲದೆ ಮತ್ತೇನೂ ಅಲ್ಲ. ಆತನ ಹಿನ್ನೆಲೆ, ವ್ಯಕ್ತಿತ್ವ ಏನ್ ಗೊತ್ತಾ. ಸುಖಾಸುಮ್ಮನೆ ಮಾತನಾಡುವ ಮುನ್ನ ಆತನ ಇತಿಹಾಸವನ್ನೊಮ್ಮೆ ನೋಡಿ. ಆತ ಸರಳಜೀವಿ, ಶ್ರಮಜೀವಿ, ವೈದ್ಯ, ಬಡವರ ಬಂಧು, ಎಲ್ಲಾದಕ್ಕಿಂತ ಹೆಚ್ಚಾಗಿ ಹೆಮ್ಮೆಯ ಮಾಜಿ ಯೋಧ.
ನಿಜ, ನೀವು ಡಾ. ಜೀವ ನಲ್ಲಿ ಓರ್ವ ವೈದ್ಯನನ್ನ ಮಾತ್ರ ಕಾಣ್ತಿದ್ದೀರಾ. ಆದ್ರೆ, ಆತ ಹೆಮ್ಮೆಯ ಮಾಜಿ ಯೋಧ ಕೂಡ. ಹತ್ತು ವರ್ಷಗಳ ಕಾಲ ಸ್ವದೇಶಕ್ಕೆ ಬೆನ್ನು ಮಾಡಿ, ದೃಷ್ಠಿಯನ್ನ ವಿದೇಶದ ವೈರಿಗಳತ್ತ ನೆಟ್ಟಿದ್ದ ಹೆಮ್ಮೆಯ ಯೋಧ ಆತ. (ಸೇನೆಯಲ್ಲಿ ಪ್ರತಿಯೊಬ್ಬರಿಗೂ ಸೈನಿಕರ ಟ್ರೈನಿಂಗ್ ಕೊಟ್ಟಿರುತ್ತಾರೆ. ಮಾಡೋ ಕೆಲಸ ಬೇರೆ ಆದ್ರು, ಟ್ರೈನಿಂಗ್ ಮಾತ್ರ ಎಲ್ಲರಿಗೂ ಒಂದೇ ರೀತಿ ಇರುತ್ತೆ. ಸಮಯ ಬಂದಾಗ ಎಲ್ಲರೂ ಕೂಡ ಎಲ್ಲದಕ್ಕೂ ಸಿದ್ಧರಿರಬೇಕು ಎಂಬ ಕಾರಣಕ್ಕೆ) ಮೂಲತಃ, ರಾಮನಗರದವರಾದ ಡಾ.ಜೀವ ಹತ್ತು ವರ್ಷಗಳ ಕಾಲ ಸೇನೆಯಲ್ಲಿ ವೈದ್ಯ ವೃತ್ತಿ ಮಾಡಿದ್ದಾರೆ. ಗಡಿಯಲ್ಲಿ ಕ್ಲಿಷ್ಟಕರ ಸಂದರ್ಭದಲ್ಲೂ ದೇಶಸೇವೆ ಮಾಡಿದ್ದಾರೆ. ಸೇನೆಯಿಂದ ಹಿಂದಿರುಗಿ ಬಂದವರು ಹೊಸ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ನಮ್ಮ ಮಲೆನಾಡನ್ನ. ತಾಲೂಕಿನ ನಂದೀಪುರ ಗ್ರಾಮದಲ್ಲಿ ವೈದ್ಯ ವೃತ್ತಿ ಮುಂದುವರೆಸಿದ್ದಾರೆ.
ಇಷ್ಟು ದಿನ ಡಾ.ಜೀವ ಅಂದ್ರೆ ಯಾರೂ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಒಂದೇ ರಾತ್ರಿ ಇಡೀ ರಾಜ್ಯಕ್ಕೆ ಪರಿಚಿತರಾಗಿದ್ದಾರೆ. ಅದಕ್ಕೆ ಕಾರಣ ಕೊರೋನ. ಹೇಳಿ-ಕೇಳಿ ಆತನೋರ್ವ ವೈದ್ಯ. ನೂರಾರು ಕಿ.ಮೀ. ಸಂಚರಿಸಿದ್ದಾರೆ. ಸಾವಿರಾರು ಜನರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಸಾಮಾಜಿಕ ಜೀವನದಲ್ಲಿ ಇದ್ದವರಿಗೆ ಇಂತದ್ದೆಲ್ಲಾ ಕಾಮನ್. ಏನೋ ಆಗಬಾರದ್ದು ಆಗಿದೆ ಎಂದು ಎರಡು ದಿನಗಳಿಂದ ಕೆಲವರು ಅವರ ಬಗ್ಗೆ ಮಾತನಾಡ್ತಿರೋ ರೀತಿ ವೈಯಕ್ತಿಕವಾಗಿ ನನಗೆ ಸರಿ ಅನ್ನಿಸಲಿಲ್ಲ. ಆತ ಕೂಡ ಓರ್ವ ಕೊರೋನ ವಾರಿಯರ್. ತನ್ನ ಜೀವದ ಹಂಗು ತೊರೆದು ಮತ್ತೊಬ್ಬರ ಜೀವ ಉಳಿಸೋದಕ್ಕೆ ಹೋರಾಡ್ತಿರೋರಲ್ಲಿ ಬಹುಮುಖ್ಯರು. ವೈದ್ಯರು, ನರ್ಸ್ಗಳು, ಪೊಲೀಸರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ಪತ್ರಕರ್ತರು ಸೇರಿದಂತೆ ಕೆಲ ವರ್ಗವಿಂದು ಕೊರೋನ ನಿಯಂತ್ರಣಕ್ಕೆ ಹಗಲಿರುಳು ಹೋರಾಡ್ತಿದೆ. ಕೆಲವರು ಪ್ರಾಣ ಕೂಡ ಬಿಟ್ಟಿದ್ದಾರೆ. ಆದರೆ, ಜೀವಗೆ ಕೊರೋನ ಬಂದಿದೆ ನಿಜ. ಎಲ್ಲಿಂದ ಬಂತು. ಯಾರಿಂದ ಬಂತು. ಹೇಗೆ ಬಂತು. ನಮ್ಮ-ನಿಮ್ಮಗಳಿಂದಲೇ. ಕೊರೋನ ಲಾಕ್ಡೌನ್ ಆದಾಗಿನಿಂದ ಅವ್ರು ಜಿಲ್ಲೆ ಬಿಟ್ಟು ಹೋಗಿಲ್ಲ. ಹೇಗೆ ಬರೋದಕ್ಕೆ ಸಾಧ್ಯ. ನಮ್ಮಿಂದಲೇ ತಾನೇ. ಆ ಒಂದು ಸಣ್ಣ ಪರಿಜ್ಞಾನವೂ ಇಲ್ಲದೆ ಜನ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತೆ ವರ್ತಿಸ್ತಿರೋದು ಸರಿಯಲ್ಲ.
ನಿಮಗೆ ಗೊತ್ತಾ. ಆತ ಹೆಮ್ಮೆಯ ಸೈನಿಕನಂತೆ, ಹೆಮ್ಮೆಯ ವೈದ್ಯ ಕೂಡ. ಅವರಿಗಾಗಿ ಎಲ್ಲೆಲ್ಲಿಂದ ಪೇಶೆಂಟ್ಗಳು ಹುಡುಕಿಕೊಂಡು ಬರ್ತಾರೆ ಗೊತ್ತ. ಮೂಡಿಗೆರೆಯ ನಂದೀಪರ ಅನ್ನೋ ಸಣ್ಣಗ್ರಾಮದ ವೈದ್ಯನಿಗಾಗಿ, ಅಕ್ಕಪಕ್ಕದ ಊರು ಬಿಡಿ, ಹಾಸನ, ಬೇಲೂರು, ಚಿಕ್ಕಮಗಳೂರುನಿಂದ ಜನ ಹುಡುಕಿಕೊಂಡು ಬರುತ್ತಾರೆ ಅಂದರೆ, ಅದಕ್ಕೆ ಕಾರಣ ಆತನ ವ್ಯಕ್ತಿತ್ವ. ನಿಮಗೆಲ್ಲಾ ಇನ್ನೊಂದು ನೆನಪಿರಲಿ. ಆತ ಎಂದೂ ದುಡ್ಡಿನ ಹಿಂದೆ ಬಿದ್ದವನಲ್ಲ. ದೇಶಸೇವೆಯ ಬಳಿಕ, ಜನಸೇವೆಯಲ್ಲಿ ಸಾರ್ಥಕತೆ ಕಾಣುತ್ತಿರೋ ಸಾಧಕ. ಅವರ ಕೈಗುಣ ಕೂಡ ಅವರ ಹೆಗ್ಗಳಿಕೆಗೆ ಸಾಥ್ ನೀಡಿದೆ. ದಾರಿಯಲ್ಲಿ ಬಿದ್ದವರಿಗೂ ಸೇವೆ ಮಾಡೋ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು. ದೇಶದಲ್ಲಿ ಲಕ್ಷಕ್ಕೂ ಅಧಿಕ ಜನಕ್ಕೆ ಬಂದಿರೋ ವೈರಸ್ ಆತನಿಗೂ ಬಂದಿದೆ ಎಂದು ಅವನ ವೈಯಕ್ತಿಕ ತೇಜೋವಧೆ ನಮ್ಮವರ ಕಾಲನ್ನ ನಾವೇ ಎಳೆದಂತೆ ನೆನಪಿರಲಿ.
ಇನ್ನೊಂದು ನೆನಪಿರಲಿ, ಆತನಿಗೆ ಕೊರೋನ ವೈರಸ್ ಬಂದಿದೆ ನಿಜ. ಆತ ಸೇನೆಯಲ್ಲಿದ್ದನು. ಹೆಲ್ತಿಯಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಕೂಡ ಸ್ಪಷ್ಟಪಡಿಸಿದೆ. ಆತನಿಂದ ಕೊರೋನ ಸೋಂಕು ಹರಡಿರೋದು ತೀರಾ ಕಡಿಮೆ ಎಂದು. ಏಕೆಂದರೆ, ಆತನಲ್ಲಿ ವೈರಸ್ ಇದೆ ಅನ್ನೋದನ್ನ ಬಿಟ್ಟರೇ ಆತ ಆರೋಗ್ಯವಂತ ವ್ಯಕ್ತಿ. ತಲೆನೋವು, ಸೀನು, ಕೆಮ್ಮು ಯಾವುದೂ ಇಲ್ಲ. ಹಾಗಾಗಿ, ಆತನಿಂದ ವೈರಸ್ ಹರಡೋದು ತೀರಾ ಕಡಿಮೆ ಅನ್ನೋ ಮಾಹಿತಿ ಫಸ್ಟ್ ಸುದ್ದಿ ನ್ಯೂಸ್ಗೆ ಲಭ್ಯವಾಗಿದೆ. ನಾನು ಹರಡೇ ಇಲ್ಲ ಎಂದು ಹೇಳ್ತಿಲ್ಲ. ಹರಡಿರಬಹುದು. ಆದರೆ, ಆ ಸಾಧ್ಯತೆ ಹಾಗೂ ಪ್ರಮಾಣ ತೀರಾ ಕಡಿಮೆ ಎಂಬುದು ನನ್ನ ಮೂಲದ ಮಾಹಿತಿ. ಇದಕ್ಕೆ ಸಾಕ್ಷಿ ಅಂದ್ರೆ ಆತನ ಜೊತೆ ಕೆಲಸ ಮಾಡ್ತಿದ್ದ 13 ಜನರ ವರದಿ ಕೂಡ ನೆಗೆಟಿವ್ ಬಂದಿರೋದು. ಆತನಿಗೆ ಕೊರೋನ ಬಂತು ಅನ್ನೋ ಒಂದೇ ಒಂದು ಕಾರಣಕ್ಕೆ ಆತನ ಸೇವೆ, ಸರ್ವಿಸ್, ವ್ಯಕ್ತಿತ್ವ ಎಲ್ಲದನ್ನೂ ಪ್ರಶ್ನಿಸೋದು ನಿಜಕ್ಕೂ ಅರ್ಥಹೀನ.
ಆತ ದಿನಾ ಪಾರ್ಟಿ ಮಾಡಿದ್ದನಂತೆ, ಮದುವೆ-ನಾಮಕರಣ-ಗೃಹಪ್ರವೇಶಕ್ಕೆ ಹೋಗಿದ್ನಂತೆ, ಹುಡುಗರ ಜೊತೆ ಸುತ್ತುತ್ತಿದ್ದನಂತೆ ಎಂದೆಲ್ಲಾ ಜನ ಮಾತನಾಡ್ತಿದ್ದಾರೆ. ಮಾಡಲಿ ಬಿಡಿ. ಈ ಭೂಮಿಯ ಮೇಲೆ ಯಾರಿಗೆ ತಾನೇ ಪರ್ಸನಲ್ ಲೈಫ್ ಇಲ್ಲ ಹೇಳಿ. ನನಗಿಲ್ವ-ನಿಮಗಿಲ್ವ. ವೈದ್ಯರು ಕುಡಿಯಬಾರದ. ಫಂಕ್ಷನ್ ಗೆ ಹೋಗಬಾರದ. ಸ್ನೇಹಿತರ ಜೊತೆ ಸೇರಬಾರದ. ಈಗ ಪಾಸಿಟಿವ್ ಬಂತು ಅಂತ ವೈಯಕ್ತಿಕ ಬದುಕನ್ನೆಲ್ಲಾ ಕೆದಕೋದು, ಕೇವಲವಾಗಿ ಮಾತನಾಡೋದು ನಿಜಕ್ಕೂ ಬ್ಯಾಡ್ ಹ್ಯಾಬಿಟ್. ವೈದ್ಯನಿಗೆ ವೈರಸ್ ಬಂದಿರೋದು ವೃತ್ತಿನಿಷ್ಠೆಯಿಂದಲೇ ಹೊರತು ಬೇರೆಲ್ಲೂ ಅಲ್ಲ. ಅದನ್ನೇ ಈಗ ಸಾಮಾಜಿಕ ಜಾಲತಾಣದಲ್ಲಿ ಬೇಕಾದಂತೆ ವಿಶ್ಲೇಷಿಸೋದು ಆತನ ದೇಶಸೇವೆ ಹಾಗೂ ವೃತ್ತಿನಿಷ್ಠೆಗೆ ಮಾಡೋ ಅಪಮಾನವೇ ಹೊರತು ಮತ್ತೇನೂ ಅಲ್ಲ. ಇವತ್ತು ಗ್ರಾಮೀಣ ಭಾಗಕ್ಕೆ ವೈದ್ಯರೇ ಬರುತ್ತಿಲ್ಲ. ಹೀಗಿರುವಾಗ ಆತ ನಮ್ಮ-ನಿಮ್ಮ ಪುಣ್ಯಕ್ಕೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಾಲನ್ನ ಎಳೆಯೋ ಬದಲು ಅವರ ಬೆನ್ನಿಗೆ ನಿಲ್ಲೋದನ್ನ ಎಲ್ಲರೂ ಕಲಿಯಬೇಕಿದೆ.
ವೈದ್ಯ ಹೌದು, ಆತ ಕೂಡ ನಮ್ಮಂತೆ ಓರ್ವ ವ್ಯಕ್ತಿ. ವೈಯಕ್ತಿಕ ಬದುಕಿದೆ. ಆಸೆ-ಆಕಾಂಕ್ಷೆಗಳಿವೆ. ಈಗ ಕೊರೋನ ಕಾರಣಕ್ಕೆ ಆತನ ವೈಯಕ್ತಿಕ ಬದುಕನ್ನ ಪ್ರಶ್ನಿಸೋದು ತರವಲ್ಲ. ನಾವು ಆತನನ್ನ ಪ್ರೀತಿಸೋಣ. ಆತನ ವೃತ್ತಿ, ವೃತ್ತಿನಿಷ್ಠೆಯನ್ನ ಗೌರವಿಸೋಣ. ಸಾಧ್ಯವಾದ್ರೆ ಬೆನ್ನಾಗಿ ನಿಲ್ಲೋಣ. ಫಸ್ಟ್ ಸುದ್ದಿ ನ್ಯೂಸ್ ಆ ಕೆಲಸ ಮಾಡುತ್ತೆ. ಆದ್ರೆ, ಇವತ್ತು ಇದ್ದು ನಾಳೆ ಹೋಗೋ ಕೊರೋನ ಕಾರಣಕ್ಕೆ ಇಷ್ಟು ದಿನ ಬಳಸಿಕೊಂಡು ಈಗ ತೆಗಳೋದು ನಮಗೆ ನಾವೇ ಮಾಡಿಕೊಳ್ಳುವ ದ್ರೋಹ. ಹಾಗಾಗಿ, ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಅವರ ಸೇವೆ ಮೂಡಿಗೆರೆ ಜನರಿಗೆ ನಿರಂತರವಾಗಿರಲೆಂದು ನಿಮ್ಮೊಂದಿಗೆ ಫಸ್ಟ್ ಸುದ್ದಿ ನ್ಯೂಸ್ ಬಳಗ ಕೂಡ ಬಯಸುತ್ತೆ……..










