ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ ಮೂಲಕ ನಮ್ಮ ಸೈನಿಕರು ಹಲವು ದಶಕದಿಂದ ಪಾಕಿಸ್ತಾನದ ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದ್ದರೂ ಕೂಡ ಅದರಿಂದ ಪಾಠ ಕಲಿಯದೆ ಆಗಾಗ್ಗೆ ದಾಳಿ ಮಾಡಿ, ದೇಶದ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಅವರ ಈ ವರ್ತನೆ ಹೀಗೆಯೇ ಮುಂದುವರೆದರೆ ಮತ್ತೊಮ್ಮೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಆ ಸಾಮರ್ಥ್ಯ ನಮ್ಮ ಸೈನ್ಯಕ್ಕಿದೆ.
ನಮ್ಮದು ಶಾಂತಿಪ್ರಿಯ ರಾಷ್ಟ್ರ. ನಾವು ಯುದ್ಧವನ್ನು ಬಯಸುವವರಲ್ಲ. ಆದರೆ ನಮ್ಮ ಈ ಮನೋಭಾವನೆ ನಮ್ಮ ದೌರ್ಬಲ್ಯವಲ್ಲ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ವಿನಾಕಾರಣ ನಮ್ಮನ್ನು ಕೆಣಕಿದರೆ ನಾವು ಎಂತಹ ಕಠಿಣ ನಿರ್ಧಾರಕ್ಕೂ ಸಿದ್ಧರಿದ್ದೇವೆ.
ಪುಲ್ವಾಮ ದುರಂತದಲ್ಲಿ ವೀರಯೋಧರನ್ನು ಕಳೆದುಕೊಂಡು ದೇಶ ಶೋಕದಲ್ಲಿದೆ. ಇಂತಹ ಹೊತ್ತಿನಲ್ಲಿ ಸಮಾರಂಭಗಳಲ್ಲಿ ಹಾರ, ತುರಾಯಿಗಳನ್ನು ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ. ದೇಶ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಈ ಸಂಭ್ರಮಾಚರಣೆ ಬೇಡ, ದಯವಿಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಸಹಕರಿಸಬೇಕು ಎಂದು ಟ್ವಿಟ್ ಮಾಡಿದ್ದಾರೆ.