ಎಸ್.ಎಲ್.ಧರ್ಮೇಗೌಡ ಹಾಗೂ ಎಸ್.ಎಲ್.ಭೋಜೇಗೌಡ ಅವರನ್ನು ಜೆ.ಡಿ.ಎಸ್ ಪಕ್ಷದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

433
firstsuddi

ಚಿಕ್ಕಮಗಳೂರು -ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಮತ್ತು ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಭೋಜೇಗೌಡ ಸಹೋದರರನ್ನು ಜಾತ್ಯಾತೀತ ಜನತಾದಳ ನಗರದಲ್ಲಿ ಗುರುವಾರ ಆತ್ಮೀಯವಾಗಿ ಅಭಿನಂದಿಸಿತು.
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಜಿಲ್ಲಾ ಮುಖಂಡರು, ಧರ್ಮೇಗೌಡ ಮತ್ತು ಭೋಜೇಗೌಡ ಸಹೋದರರಿಗೆ ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಅಭಿನಂದನೆಯ ಮಹಾಪೂರ :- ಇದೇ ವೇಳೆ ಎಸ್.ಎಲ್.ಡಿ ಮತ್ತು ಎಸ್.ಎಲ್.ಬಿ ಸಹೋದರರನ್ನು ಅಭಿನಂದಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿ ಬೆಳಗಿನಿಂದ ಕಾದು ನಿಂತಿದ್ದ ಪಕ್ಷದ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು, ಅಭಿಮಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದ ನಡುವೆಯೇ ಸಂಘಟಕರ ತಡೆಯನ್ನೂ ಲೆಕ್ಕಿಸದೆ ವೇದಿಕೆಗೆ ತೆರಳಿ ಸಹೋದರರನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಸ್.ಎಲ್.ಧರ್ಮೇಗೌಡ ಅವರಿಗೆ ನಿನ್ನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮತ್ತು ಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿದ್ದ ಮಾತಿನಂತೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಜೆಡಿಎಸ್‍ನ ಜಿಲ್ಲಾ ಮುಖಂಡರ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿ ಧರ್ಮೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಗತ ಸಮಿತಿಯ ಅಧ್ಯಕ್ಷ ಹೆಚ್.ಹೆಚ್.ದೇವರಾಜ್. ಎಸ್.ಎಲ್.ಧರ್ಮೇಗೌಡರು ಮತ್ತು ಎಸ್.ಎಲ್.ಭೋಜೇಗೌಡರು ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ದುಡಿಯಬೇಕು ಎಂದು ಸಲಹೆ ಮಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್.ಎಲ್.ಧರ್ಮೇಗೌಡ ಜಿಲ್ಲೆಯ ಬಯಲು ಸೀಮೆಗೆ ನೀರೊದಗಿಸುವ ಕರಗಡ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ 20 ಕೋಟಿ ರೂ ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಎಸ್.ಎಲ್.ಭೋಜೇಗೌಡ ಮಾತನಾಡಿ ಅಭಿಮಾನಿಗಳು, ಶಿಕ್ಷಕರು ಮತ್ತು ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಮತ್ತು ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಪಕ್ಷದ ಮುಖಂಡರಾದ ಎಂ.ಎಸ್.ಬಾಲಕೃಷ್ಣೇಗೌಡ, ಹೆಚ್.ಜಿ.ವೆಂಕಟೇಶ್, ಹೆಚ್.ಟಿ.ರಾಜೇಂದ್ರ, ಹೆಚ್.ಎಸ್.ಮಂಜಪ್ಪ, ಜಿ.ಹೆಚ್.ಚಂದ್ರಪ್ಪ, ಜಮೀಲ್ ಅಹಮದ್, ಉಮಾಪತಿ, ಚಂದ್ರೇಗೌಡ, ಎಂ.ಎಲ್.ವಸಂತ ಕುಮಾರಿ, ಜ್ಯೋತಿ ಈಶ್ವರ್, ಪದ್ಮಾ ತಿಮ್ಮೇಗೌಡ, ಮಾನು ಮಿರಾಂಡ, ವಿನಯ್ ಕೋಟೆ, ಭೈರೇಗೌಡ, ಡಿ.ಜೆ.ಸುರೇಶ್, ನಿಸಾರ್ ಅಹಮದ್, ಹೆಚ್.ಸಿ.ಕೃಷ್ಣೇಗೌಡ, ಎಂ.ನರೇಂದ್ರ, ಹೊಲದಗದ್ದೆ ಗಿರೀಶ್, ಎಂ.ಡಿ.ರಮೇಶ್, ದಿನೇಶ್, ಆನಂದ ನಾಯ್ಕ ಉಪಸ್ಥಿತರಿದ್ದರು.