ಬೆಂಗಳೂರು: ವಿಧಾನ ಪರಿಷತ್ ಶಾಸಕರಾದ ಎಸ್.ಎಲ್.ಧರ್ಮೇಗೌಡರವರು ವಿಧಾನ ಪರಿಷತ್ ಉಪಸಭಾ ಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧರ್ಮೇಗೌಡರು ರಾಜ್ಯದ ಇಷ್ಟು ದೊಡ್ಡ ಸ್ಥಾನಕ್ಕೇರಲು ಸಾಗಿ ಬಂದ ಹಾದಿ ಬಹಳ ಸುದೀರ್ಘ ವಾಗಿದೆ. ರಾಜಕೀಯದ ಹಾವು ಏಣಿ ಆಟದಲ್ಲಿ ಹಲವು ಅಗ್ನಿ ಪರೀಕ್ಷೆಗಳನ್ನು ಅವರು ಎದುರಿಸಿ ಮುಂದೆ ಬಂದಿದ್ದಾರೆ. ಬಿಳೇ ಕಲ್ಲಹಳ್ಳಿ ಮಂಡಲಪಂಚಾ ಯಿತಿಯಿಂದ ಹಿಡಿದು ಈಗ ವಿಧಾನ ಪರಿಷತ್ ಉಪಸಭಾ ಪತಿ ಸ್ಥಾನದವರೆಗೆ ಅವರು ಸಾಗಿ ಬಂದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಳದ ಬೆಳಗಾವಿ ಅಧಿವೇಶನದಲ್ಲಿ ನೆನಯದೇ ಭಾಗ್ಯ ಧರ್ಮೇಗೌಡರನ್ನು ಹುಡುಕಿಕೊಂಡ ಬಂದಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಧರ್ಮೇ ಗೌಡರು ಸಚಿವರಾಗುತ್ತಾರೆಂದು ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ನಂಬಿದ್ದರು. ಆದರೆ,ಈಗ ಅವರು ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾಗುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತೀವ್ರ ಕುತೂಹಲ ಇದ್ದ ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ನಿರೀಕ್ಷಿತ ವ್ಯಕ್ತಿಗಳು ಆಯ್ಕೆಯಾಗಿದೇ ಅನಿರೀಕ್ಷಿತ ಆಯ್ಕೆ ಸಂಭವಿಸಿರುವುದರ ಬೆನ್ನ ಹಿಂದೆಯೇ ಈಗ ವಿಧಾನ ಪರಿ ಷತ್ ಉಪ ಸಭಾಪತಿ ಸ್ಥಾನಕ್ಕೂ ಅನಿರೀಕ್ಷಿತವಾಗಿ ಧರ್ಮೇ ಗೌಡರು ಆಯ್ಕೆಯಾಗಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಸ್ಥಾನ ಜೆ.ಡಿ.ಎಸ್ ಪಾಲಿಗೆ ಸೇರಿದ್ದ ರಿಂದ ಕೆ.ಟಿ.ಶ್ರೀಕಂಠೇಗೌಡ ಮತ್ತು ಮರಿತಿಬ್ಬೇಗೌಡ ರವರ ನಡುವೆ ಜೆ.ಡಿ.ಎಸ್‍ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿತ್ತು.
ಬುಧವಾರ ನಿಗದಿಯಾಗಿದ್ದ ಪರಿಷತ್ ಉಪಸಭಾಪತಿ ಚುನಾ ವಣೆಗೆ ಮಂಗಳವಾರ ಧರ್ಮೇ ಗೌಡರು ಮಾತ್ರ ನಾಮಪತ್ರ ಸಲ್ಲಿಸಿ ದ್ದರಿಂದ ಅವರ ಅವಿರೋಧ ಆಯ್ಕೆ ನಡೆದಿದೆ.
ಯಾವುದೇ ಲಾಬಿ ಮಾಡದಿ ದ್ದರೂ ಧರ್ಮೇಗೌಡರ ಪಕ್ಷನಿಷ್ಠೆ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದೊಂ ದಿಗಿನ ಅವಿನಾಭಾವ ಸಂಬಂಧ ಇದೆಲ್ಲವೂ ಧರ್ಮೇಗೌಡರನ್ನು ಪರಿಷತ್‍ನ ಉಪ ಸಭಾಪತಿ ಹುದ್ದೆಗೇರುವಂತೆ ಮಾಡಿದೆ.
ಜನಪ್ರತಿನಿಧಿಗಳ ವಿಧಾನ ಮಂಡಳದ ಪಾಲಿಗೆ ಅತ್ಯಂತ ಉನ್ನತ ಹುದ್ದೆಗಳಲ್ಲಿ ಉಪ ಸಭಾ ಪತಿ ಸ್ಥಾನ ಸೇರಿದೆ. ಇಂತಹ ಪ್ರತಿಷ್ಠಿತ ಹುದ್ದಗೆ ಈಗ ಧರ್ಮೇ ಗೌಡರು ಆಯ್ಕೆಯಾಗಿದ್ದಾರೆ.
ಚಿಕ್ಕಮಗಳೂರುತಾಲ್ಲೂಕು ಲಕ್ಯಾ ಹೋಬಳಿ,ಸರ್ಪನಹಳ್ಳಿ ಗ್ರಾಮದ ಮಾಜಿ ಶಾಸಕ ದಿವಂಗತ ಎಸ್.ಆರ್.ಲಕ್ಷಯ್ಯ ರವರ ಎರಡನೇ ಮಗನಾಗಿರುವ ಎಸ್.ಎಲ್.ಧರ್ಮೇಗೌಡರು ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಬಿ.ಎ.ಪದವಿ ವ್ಯಾಸಂಗ ಮಾಡಿದ್ದಾರೆ.
ಸಹಕಾರಿ ಕ್ಷೇತ್ರ ಸೇರಿದಂತೆ ರಾಜಕೀಯದಲ್ಲಿ 36 ಕ್ಕೂ ಹೆಚ್ಚು ವಿವಿಧ ಚುನಾವಣೆಗಳನ್ನು ಎದುರಿಸಿ ಜನಪರವಾದ ಹಲವು ನಿಲುವುಗಳನ್ನು ತಾಳಿರುವ ಇವರು ಈಗ ರಾಜ್ಯದ ಉನ್ನತ ಹುದ್ದೆಗಳಲ್ಲೊಂದು ಚಿಕ್ಕಮ ಗಳೂರು ಜಿಲ್ಲೆಯ ಪಾಲಿಗೆ ಬರು ವಂತೆ ಮಾಡಿದ್ದಾರೆ.
ಬಿಳೇಕಲ್ಲಹಳ್ಳಿ ಮಂಡಲ ಪ್ರಧಾನರಾಗಿ,ಚಿಕ್ಕಮಗಳೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ,ಜಿಲ್ಲಾ ಜನತಾ ಬಜಾರ್‍ನ ಅಧ್ಯಕ್ಷರಾಗಿ,ಚಿಕ್ಕಮ ಗಳೂರು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಹಾಗೂ 30 ವರ್ಷಗಳ ಕಾಲ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೇಶಕ ರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದ ಸಹಕಾರ ಸಂಸ್ಥೆಗಳಾದ ಇಫ್ಕೋ, ಐ.ಪಿ.ಎಲ್., ನಾಫೆಡ್ ಹಾಗೂ ಎನ್.ಸಿ.ಡಿ.ಸಿ.,ಗಳ ನಿರ್ದೇಶಕ ರಾಗಿ ಕೆಲಸ ಮಾಡಿ,ಅಂತರಾ ಷ್ಟ್ರೀಯ ಸಹಕಾರಕ್ಷೇತ್ರದಲ್ಲಿ ನಡೆಯುವ 33 ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಸಭೆಯಲ್ಲಿ ಭಾಗವಹಿಸಿದ್ದಾರೆ.
ಕರ್ನಾಟಕರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದಲ್ಲದೇ ಅವರು ರಾಜ್ಯ ಸರ್ಕಾರ ನೀಡುವ ಸಹಕಾರ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿಗೆ ಹಾಗೂ ತಾಲ್ಲೂಕು ಪಂಚಾಯ್ತಿಗೆ ಏಕ ಕಾಲದಲ್ಲಿ ಆಯ್ಕೆಯಾದ ದಾಖಲೆ ಧರ್ಮೇ ಗೌಡರ ಪಾಲಾಗಿದ್ದು ಇತಿಹಾಸ.
2004 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೀರೂರು ಕ್ಷೇತ್ರದಿಂದ ಆಯ್ಕೆಯಾಗಿ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿದ್ದಾರೆ.










