ಚಿಕ್ಕಮಗಳೂರು -ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಮತ್ತು ವಿಧೇಯತೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಸಲಹೆ ಮಾಡಿದರು.ನಗರದ ಎಂಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಅಸಹಿಷ್ಣತೆ ಹೆಚ್ಚುತ್ತಿದೆ, ಪರಸ್ಪರನ್ನು ಗೌರವಿಸುವ ಮನೋಭಾವ ಕಡಿಮೆಯಾಗುತ್ತಿದೆ ಇದರಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಣೆಯಾಗುತ್ತಿದೆ ಎಂದು ವಿಷಾದಿಸಿದ ಅವರು ಇದನ್ನು ತೊಲಗಿಸುವ ನಿಟ್ಟಿನಲ್ಲಿ ಯುವ ಜನತೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು, ಇನ್ನೊಬ್ಬರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳಿಗೆ ಮೈಲಿಗಲ್ಲು ಇದ್ದಂತೆ ಈ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದು ಕೊಳ್ಳಬೇಕು ಮುಂದಡಿ ಇಡುವ ಮುನ್ನ ಚಿಂತನೆ ಮಾಡಬೇಕು ಎಂದರು.ಜ್ಞಾನವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ದಿನಕ್ಕೆ ಕನಿಷ್ಠ ಒಂದಾದರೂ ಬೇರೆ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು.ಕೊಡಗಿನ ನೆರೆ ಸಂತ್ರಸ್ತರಿಗಾಗಿ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ 35 ಸಾವಿರ ರೂ ಹಣವನ್ನು ಸಂಗ್ರಹಿಸಿದ್ದು, ಅದನ್ನು ಸದ್ಯದಲ್ಲೇ ಸಂತ್ರಸ್ತರ ನಿಧಿಗೆ ನೀಡಲಾಗುವುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್ ವಿದ್ಯಾರ್ಥಿಗಳು ಶ್ರದ್ದೆಯಿಂದ ವಿದ್ಯಾರ್ಜನೆ ಮಾಡಿ ಉನ್ನತ ಸ್ಥಾನಗಳನ್ನು ಅಲಂಕರಿಸಿದರೆ ಕಾಲೇಜಿನ ಶ್ರಮ ಸಾರ್ಥಕವಾಗುತ್ತದೆ ಎಂದರು.ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಕೇರಳ ಮತ್ತು ಕೊಡಗಿನಲ್ಲಿ ಸಂಭವಿಸಿದ ಪ್ರವಾಹದಲ್ಲಿ ನಿಧನರಾದವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನಾಚರಣೆ ಮಾಡಲಾಯಿತು.ಸಂಸ್ಥೆಯ ಸಹಕಾರ್ಯದರ್ಶಿ ಎಸ್.ಶಂಕರನಾರಾಯಣಭಟ್, ಪದನಿಮಿತ್ತ ಸದಸ್ಯೆ ಉಮಾನಾಗೇಶ್, ನಿರ್ದೇಶಕ ಕನಕರಾಜ್ ಉಪಸ್ಥಿತರಿದ್ದರು.ಉಪನ್ಯಾಸಕಿ ಎಸ್.ಎಲ್.ಮಾನಸ ಕಾರ್ಯಕ್ರಮವನ್ನು ನಿರೂಪಿಸಿದರು, ವಿದ್ಯಾರ್ಥಿಗಳಾದ ಎಂ.ಅದಿತಿ ಸ್ವಾಗತಿಸಿದರು, ಎ.ಎಂ.ನಿಧಿ ವಂದಿಸಿದರು.