ಚಿಕ್ಕಮಗಳೂರು: ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹದಿನೆಂಟುವರೆ ಕೆ.ಜಿ. ತೂಕದ ಚಿಪ್ಪು ಹಂದಿ ಪತ್ತೆಯಾಗಿದೆ. ಸುಮಾರು ಎರಡರಿಂದ ಮೂರು ಲಕ್ಷ ಬೆಲೆಬಾಳುವ ಈ ಚಿಪ್ಪು ಹಂದಿಯನ್ನ ಬೇಟೆಯಾಡಿ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದ ಇಬ್ಬರಲ್ಲಿ ಓರ್ವ ಆರೋಪಿಯನ್ನ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಹಲಸೂರು ಮೀಸಲು ಅರಣ್ಯದಲ್ಲಿ ಪ್ರದೀಪ್ ಹಾಗೂ ಪ್ರಕಾಶ್ ಎಂಬ ಇಬ್ಬರು ಯುವಕರು ಚಿಪ್ಪು ಹಂದಿಯನ್ನ ಬೇಟೆಯಾಡಿದ್ರು. ಬೇಟೆಯ ಬಳಿಕ ಹಂದಿಯನ್ನ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಳೆಹೊನ್ನೂರು ಎ.ಸಿ.ಎಫ್ ಲೋಹಿತ್ ಕುಮಾರ್, ಆರ್.ಎಫ್.ಓ ತನುಜಕುಮಾರ್ ಹಾಗೂ ಡಿ.ಆರ್.ಎಫ್.ಓ ಸುಂದ್ರೇಶ್ ದಾಳಿ ನಡೆಸಿ ಪ್ರದೀಪ್ ಎಂಬಾತನನ್ನ ಬಂಧಿಸಿ ಚಿಪ್ಪು ಹಂದಿಯನ್ನ ರಕ್ಷಿಸಿದ್ದಾರೆ. ಆದ್ರೆ, ಮತ್ತೋರ್ವ ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಪ್ರಕಾಶ್ ಗಾಗಿ ಬಲೆ ಬೀಸಿದ್ದಾರೆ. ಈ ಚಿಪ್ಪು ಹಂದಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ ಎಂದು ಹೇಳಲಾಗ್ತಿದೆ.









