ಚಿಕ್ಕಮಗಳೂರು : ವಿಧಾನಸೌಧದ ಆವರಣದಲ್ಲಿ 25 ಲಕ್ಷ ಹಣ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಟಿ.ರವಿ ಅವರು ಈ ಪ್ರಕರಣ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತಾಗಿದೆ. ಯಾರು ಕೂಡ ಟೈಪಿಂಗ್ ಮಾಡುವವರಿಗೆ 25 ಲಕ್ಷ ಹಣ ಕೊಡುವುದಿಲ್ಲ.25 ಲಕ್ಷ ಹಣ ಕೊಡ್ತಾರೆ ಅಂದ್ರೆ ಅದು ಮಂತ್ರಿಗಳಿಗೆ ಸೇರಿರಬೇಕು. ಇದರ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು.ರಾಜೀನಾಮೆ ನೀಡಲು ಸಚಿವರು ನಿರಾಕರಿಸಿದ್ರೆ ಮುಖ್ಯಮಂತ್ರಿ ಗಳು ಅವರ ರಾಜೀನಾಮೆ ಪಡೆಯಬೇಕು. ಸಚಿವ ಪುಟ್ಟರಂಗಶೆಟ್ಟಿಯವರು ಭಂಡತನದಿಂದ ವರ್ತಿಸಬಾರದು. ಕಾಂಗ್ರೆಸ್, ಜೆಡಿಎಸ್ ನವರು ಭಂಡತನದಿಂದ ಈ ಪ್ರಕರಣವನ್ನು ಸಮರ್ಥನೆ ಮಾಡಿಕೊಳ್ಳಬಾರದು. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಆಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಉಂಡವನೇ ಜಾಣ ಎಂಬಂತೆ ಮೈತ್ರಿ ಸರ್ಕಾರದಲ್ಲಿ ತಮ್ಮ ತಮ್ಮ ಸಾಮರ್ಥಕ್ಕೆ ಅನುಗುಣವಾಗಿ ಲೂಟಿ ಹೊಡೆಯುವ ಕಾರ್ಯ ನಡೆಯುತ್ತಿದೆ.ಮೈತ್ರಿ ಸರ್ಕಾರ ಲಂಚ ಪಡೆಯುವ ಹಾಗೂ ಕೊಡುವುದನ್ನ ಅಧಿಕೃತಗೊಳಿಸಬೇಕು. ಆಗ ಸರ್ಕಾರ ಪ್ರಾಮಾಣಿಕ ಅಲ್ಲದಿದ್ದರೂ ಪಾರದರ್ಶಕ ಎಂದು ಹೇಳಿಕೊಳ್ಳಬಹುದು. ಪ್ರಕರಣದ ಸಮಗ್ರ ತನಿಖೆ ನಡೆಯಬೇಕು .ತನಿಖೆ ಪೂರ್ಣಗೊಳ್ಳುವರೆಗೂ ಸಚಿವ ಪುಟ್ಟರಂಗಶೆಟ್ಟಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದಿದ್ದಾರೆ.










