ಮೂಡಿಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಡಿಗೆರೆಯ ನಿಲ್ದಾಣದಲ್ಲಿ ಕತ್ತಲೆಯಾದರೆ ಸಾಕು ಮೂಡಿಗೆರೆ ಬಸ್ ನಿಲ್ದಾಣದಿಂದ ಚಿಕ್ಕಮಗಳೂರಿಗೆ ಹೋಗುವ ಪ್ರಯಾಣಿಕರಿಗೆ ಸರಿಯಾಗಿ ನಿರ್ದಿಷ್ಟ ನಿಗದಿತ ಸಮಯದಲ್ಲಿ ಸಾರಿಗೆ ಬಸ್ ಇಲ್ಲವೆಂದು ಇಲ್ಲಿಯ ಜನತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಪಟ್ಟಣದಿಂದ ಪ್ರತಿದಿನವು ಸರ್ಕಾರಿ ಹಾಗೂ ವಿವಿಧ ಖಾಸಗಿ ಸಂಸ್ಥೆಯಲ್ಲಿ ದುಡಿಯುವ ವಿವಿಧ ರೀತಿಯ ಉದ್ಯೋಗಸ್ಥರು ಇಲ್ಲಿಂದ ಚಿಕ್ಕಮಗಳೂರಿಗೆ ಪ್ರತಿದಿನವೂ ಸಂಚರಿಸಲು ಇಲ್ಲಿನ ಸರ್ಕಾರಿ ಬಸ್ಸನ್ನೇ ಅವಲಂಬಿಸಿದ್ದು ಅದರಲ್ಲೂ ವಿಶೇಷವಾಗಿ ಮಹಿಳಾ ಉದ್ಯೋಗಸ್ಥರು ಅಧಿಕವಾಗಿ ಸಂಜೆ ಕೆಲಸವನ್ನು ಬಿಟ್ಟು ತಮ್ಮ ಮನೆಯನ್ನು ತಲುಪಲು ಇಲ್ಲಿಗೆ ಓಡೋಡಿ ಬಂದು ಸಂಜೆ 6 ಗಂಟೆಯ ಒಳಗಾಗಿ ತಲುಪಿದರೆ ಸರಿ ಇಲ್ಲವಾದರೆ ಅವರು ಬಸ್ ಸ್ಟ್ಯಾಂಡ್ ಕಾಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮೂಡಿಗೆರೆ ಘಟಕದಿಂದ ಹೊರಡುವ ಬಸ್ಸುಗಳು ಸಂಜೆಯಾಗುತ್ತಲೆ ಸ್ಥಗಿತಗೊಳ್ಳುವುದರಿಂದ ತನ್ನ ಕೆಲಸದ ಒತ್ತಡ ಹಾಗೂ ಇತರೆ ತುರ್ತು ಅಗತ್ಯೆತೆಗಾಗಿ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಸಂಜೆ 6 ರ ನಂತರ ಸ್ಥಗಿತಗೊಳ್ಳುವ ಬಸ್ಸಿನ ಪರಿಣಾಮ ಇಲ್ಲಿಯ ನಿಲ್ದಾಣದಲ್ಲೇ ಸುಮಾರು 8 ಅಥವಾ 9 ಗಂಟೆ ರಾತ್ರಿಯವರೆಗೆ ಕಾಯುವುದರಿಂದ ಧರ್ಮಸ್ಥಳ ಅಥವಾ ಮಂಗಳೂರಿನಿಂದ ಬರುವ ಬಸ್ ನ್ನೇ ಅವಲಂಬಿಸುವಂತಾಗಿದೆ. ಅದಲ್ಲದೆ ಈ ಬಸ್ಸುಗಳು ಚಾರ್ಮಾಡಿ ಘಾಟ್ ರಸ್ತೆಯ ಮುಖಾಂತರ ಬರುವಾಗ ಅಲ್ಲೇನಾದರೂ ರಸ್ತೆಯಲ್ಲಿ ಅಡಚಣೆಗಳಿದ್ದಲ್ಲಿ ಆ ಬಸ್ಸು ಸಹ ನಿಗದಿತ ಸಮಯಕ್ಕೆ ಬರದೇ ಇಲ್ಲಿನ ಪ್ರಯಾಣಿಕರು ರಾತ್ರಿ ಇಡೀ ಬಸ್ಸನ್ನು ಕಾದು ಕಾದು ಪರಿತಪಿಸುವಂತಾಗಿದೆ ಎಂದು ಇಲ್ಲಿನ ಸಾರ್ವಜನಿಕ ಪ್ರಯಾಣಿಕರು ದೂರಿದ್ದಾರೆ.
ಈ ವಿಚಾರದ ಕುರಿತಂತೆ ಜಯಮಿತ್ರ ದಿನಪತ್ರಿಕೆ ಸವಿಸ್ತಾರವಾಗಿ ವರದಿ ಮಾಡಿದ್ದಾದರೂ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಇಲ್ಲಿಯ ಸಂಸ್ಥೆಯ ಅಧಿಕಾರಿಗಳು ಇಲ್ಲಿಯವರೆಗೂ ಸುಮ್ಮನೆ ಕೂತಿದ್ದು ಇದರ ಕುರಿತು ಮನವರಿಕೆ ಮಾಡಿ ಈಗಿನ ಘಟಕ ವ್ಯವಸ್ಥಾಪಕರೊಂದಿಗೆ ನಮ್ಮ ಪ್ರತಿನಿಧಿ ಮಾತನಾಡಿದಾಗ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಮೂಡಿಗೆರೆ ನಿಲ್ದಾಣದಿಂದ ಚಿಕ್ಕಮಗಳೂರಿಗೆ ಸಂಜೆ 7 ಕ್ಕೆ ಹೊಸದಾಗಿ ಬಸ್ ಬಿಡುವ ಕುರಿತು ಯೋಚಿಸಲಾಗುವುದು ಎಂದು ಪ್ರತಿಕ್ರಯಿಸಿದ್ದಾರೆ.










