ಮೂಡಿಗೆರೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‍ಗಳಿಗೆ ಎರಡು ದಿನಗಳಿಗೆ ಸೀಮಿತವಾಗಿದ್ದ ಕುಡಿಯುವ ನೀರು ಮೂರು ದಿವಸಗಳಿಗೆ ಸೀಮಿತಗೊಳಿಸಿದ್ದಕ್ಕೆ ಪಟ್ಟಣ ಜನತೆಗೆ ಬೇಸಿಗೆ ಪ್ರಾರಂಭಕ್ಕೂ ಮೊದಲೇ ಕುಡಿಯುವ ನೀರಿಗಾಗಿ ಆಹಾಕಾರದ ಬಿಸಿ ತಟ್ಟಿದ್ದು, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಾಗೂ ಎಲ್ಲ ಜನಪ್ರತಿನಿಧಿಗಳ ವಿರುದ್ದ ಇಲ್ಲಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮುಂಚಿತವಾಗಿ ಸುಮಾರು ಒಂದು ಗಂಟೆಗೂ ಅಧಿಕವಾಗಿ ಎರಡು ದಿನಕೊಮ್ಮೆ ನೀರನ್ನು ಸರಬರಾಜು ಮಾಡುತ್ತಿದ್ದ ಪಟ್ಟಣ ಪಂಚಾಯಿತಿ ಇದೀಗ ಮೂಡಿಗೆರೆಯ ಬೀಜುವಳ್ಳಿ ಪಂಪ್ ಹೌಸ್ ನ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ, ಸದ್ಯ ಎರಡು ದಿವಸಕ್ಕೆ ಸೀಮಿತವಾಗಿದ್ದ ಕುಡಿಯುವ ನೀರು ಸುಮಾರು ಒಂದು ತಿಂಗಳವರೆಗೆ ಮೂರು ದಿವಸಕ್ಕೆ ಎಂದು ಸಂಬಂಧಪಟ್ಟ ಪಟ್ಟಣ ಪಂಚಾಯಿತಿಯವರು ಬಹಿರಂಗ ಪಡಿಸಿರುತ್ತಾರೆ.
ಆದರೆ ಪದೇ ಪದೇ ವಿದ್ಯುತ್ ಅಭಾವದಿಂದ ಸದ್ಯ ಮೂರು ದಿವಸಗಳಿಗೆ ಸರಬರಾಜಾಗುತ್ತಿದ್ದ ನೀರು ಸಹ ಸರಿಯಾಗಿ ಸರಬರಾಜಾಗದೆ ಪಟ್ಟಣದ ಜನತೆ ಪರದಾಡುವಂತಾಗಿದೆ. ಇದೀಗ ಈ ನೀರಿನ ಸರಬರಾಜು ಕಿತ್ತಲೆಗಂಡಿ ಹೇಮಾವತಿ ನದಿಯಿಂದ ಸರಬರಾಜಾಗುತ್ತಿದ್ದು, ಪಟ್ಟಣಕ್ಕೆ ನಿರಂತರ ನೀರಿನ ಸರಬರಾಜಿಗಾಗಿ 24ಗಂಟೆಗಳ ಎಕ್ಸ್ ಪ್ರೆಸ್ ಲೈನ್ ಅಳವಡಿಸಿದ್ದು, ಆದರೂ ಸಹ ಇದರ ಸದುಪಯೋಗ ಪಡೆಯಲು ಇಲ್ಲಿನ ಜನತೆಗೆ ಯೋಗವಿಲ್ಲದಂತಾಗಿದೆ.
ಈ ಕುರಿತು ಸಂಬಂಧಿಸಿದಂತೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಮೆಸ್ಕಾಂ ಅಧಿಕಾರಿಗಳು ನಾವು ಈ ಮುಂಚಿತವಾಗಿ ವಿದ್ಯುತ್ ಅಭಾವದ ಬಗ್ಗೆ ಮೌಖಿಕವಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ನಮ್ಮಲ್ಲಿ ಕೇಂದ್ರ ಸರ್ಕಾರದ ವಿದ್ಯುತ್ ಕೇಬಲ್ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದ್ದು, ಬೀಜವಳ್ಳಿಯ ಸಂಪ್ ದುರಸ್ಥಿ ಕಾರ್ಯವು ಒಂದಿಷ್ಟು ದಿನ ಮುಂದೂಡಿ ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಿದ ನಂತರ ದುರಸ್ಥಿ ಕಾರ್ಯವು ಕೈಗೆತ್ತಿಕೊಳ್ಳಿ ಎಂದು ಮನವಿ ಮಾಡಲಾಗಿತ್ತು. ಆದರೆ ಈ ಕಾಮಗಾರಿ ಕೈಗೊಳ್ಳುವ ಮೊದಲು ಪೂರ್ವ ಸಿದ್ಧತೆ ನಡೆಸಿದ್ದಲ್ಲಿ ಇಂತಹ ತೊಂದರೆ ಆಗುತ್ತಿರಲಿಲ್ಲ ಎಂದು ತಿಳಿಸಿದರು.











