ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ : ಪ್ರಧಾನಿ ನರೇಂದ್ರ ಮೋದಿ.

149
firstsuddi

ನವದೆಹಲಿ : ಲಡಾಖ್‍ನ ಗಾಲ್ವಾನ್ ಗಡಿಯಲ್ಲಿ ಚೀನಾ-ಭಾರತ ನಡುವೆ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಮಂದಿ ಯೋಧರು ಹುತಾತ್ಮರಾಗಿದ್ದು, ನಮ್ಮ ಯೋಧರ ಬಲಿದಾನವನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಮ್ಮ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ನಮ್ಮ ಯೋಧರ ಬಲಿದಾನವನ್ನು ನಾವು ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಯೋಧರು ಹೊಡೆದಾಡುತ್ತಲೇ ಹುತಾತ್ಮರಾಗಿದ್ದಾರೆ. ನಾವು ಯಾರನ್ನೂ ಪ್ರಚೋದಿಸುವುದಿಲ್ಲ. ನಮ್ಮನ್ನು ಪ್ರಚೋದಿಸಿದರೆ ಉತ್ತರ ನೀಡಲು ನಮಗೂ ಬರುತ್ತದೆ. ದೇಶದ ಅಖಂಡತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಯಾವುದೇ ಸಮಯದಲ್ಲೂ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಿದ್ಧವಾಗಿದೆ. ಭಾರತ ಶಾಂತಿಯನ್ನು ಬಯಸುತ್ತದೆ. ಜೊತೆಗೆ ಪ್ರತ್ಯುತ್ತರ ನೀಡಲು ಬರುತ್ತದೆ. ನಮ್ಮ ಶಕ್ತಿಯ ಬಗ್ಗೆ ಯಾರಿಗೂ ಭ್ರಮೆ, ಅನುಮಾನ ಬೇಡ ಎಂದು ತಿಳಿಸಿ 2 ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.