ರಾಜ್ಯ ಸರ್ಕಾರ ಮದ್ಯದ ಮೂಲದಿಂದ ಬರುವ ಆದಾಯವನ್ನು ನಿರೀಕ್ಷಿಸಬಾರದು.- ಶಾಸಕ ಸಿ.ಟಿ.ರವಿ…

355
firstsuddi

ಚಿಕ್ಕಮಗಳೂರು: ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ನಾಡಿನಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಗರದ ಆಜಾದ್ ಪಾರ್ಕ್ ಗಣಪತಿ ಪೆಂಡಾಲಿನಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ದುಶ್ಚಟಮುಕ್ತ ಸಮಾಜ ವಿಚಾರ ಸಂಕಿರಣ ಹಾಗೂ ಜನಜಾಗೃತಿ ಸಮಾವೇಷದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮದ್ಯಮಾರಾಟದ ಮೂಲದಿಂದ ರಾಜ್ಯ ಸರ್ಕಾರಕ್ಕೆ 22 ಸಾವಿರ ಕೋಟಿ ಆದಾಯವಿದೆ, ಅದು ಮುಂದಿನ ದಿನಗಳಲ್ಲಿ 25 ಸಾವಿರ ಕೋಟಿಗೆ ಏರುತ್ತದೆ ಇದರಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಆದರೆ ಕುಡಿತದಿಂದ ಲಕ್ಷಾಂತರ ಜನರ ಬದುಕು ಹಾಳಾಗುತ್ತಿದೆ ಎಂದು ವಿಷಾದಿಸಿದರು.ಮದ್ಯ ಮಾರಾಟದಿಂದ 22 ಸಾವಿರ ಕೋಟಿ ಆದಾಯ ಸರ್ಕಾರಕ್ಕೆ ಬರುತ್ತದೆ ನಿಜ, ಆದರೆ ಕುಡಿತದಿಂದ ಅನಾರೋಗಕ್ಕೀಡಾದವರಿಗೆ ಚಿಕಿತ್ಸೆಗಾಗಿ 2 ಲಕ್ಷ ಕೋಟಿಗೂ ಅಧಿಕ ಹಣ ಖರ್ಚಾಗುತ್ತದೆ ಎಂದ ಅವರು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮದ್ಯದ ಮೂಲದಿಂದ ಬರುವ ಆದಾಯವನ್ನು ನಿರೀಕ್ಷಿಸಬಾರದು, ನಾಡಿನ ಜನತೆಯ ಕೌಟುಂಬಿಕ ನೆಮ್ಮದಿ ಮತ್ತು ಅವರ ಆರೋಗ್ಯಕ್ಕಾಗಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಮಾತನಾಡಿ ಮದ್ಯವಿಲ್ಲದೆ ಚುನಾವಣೆಯೇ ಇಲ್ಲ ಎಂಬ ಪರಿಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗಿದೆ, ಜನತೆಯ ಹಿತದೃಷ್ಠಿಯಿಂದ ಆ ವ್ಯವಸ್ಥೆ ಬದಲಾಗಬೇಕು ಆರೋಗ್ಯವಂತ ಸಮಾಜಕ್ಕಾಗಿ ಮದ್ಯವ್ಯಸನವನ್ನು ಬಿಡಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|| ಎಲ್.ಹೆಚ್.ಮಂಜುನಾಥ್, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕನಸು ನನಸಾಗಬೇಕಾದರೆ ಬಿಹಾರ ಮತ್ತು ಗುಜರಾತ್‍ನಂತೆ ರಾಜ್ಯದಲ್ಲೂ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅನಧಿಕೃತ ಮತ್ತು ಅಕ್ರಮ ಮದ್ಯ ಮಾರಾಟವನ್ನು ಪೋಲಿಸ್ ಇಲಾಖೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಮದ್ಯ ಮಾರಾಟ ನಿಷೇಧವನ್ನು ಸರ್ಕಾರದಿಂದ ನಿರೀಕ್ಷಿಸುವ ಬದಲು ಜನತೆ ಸ್ವಯಂ ಮನಪರಿವರ್ತನೆ ಮಾಡಿಕೊಳ್ಳಬೇಕು ತಾವು ಬದಲಾಗುವ ಬಗ್ಗೆ ತಾವೇ ನಿರ್ಣಯಕೈಗೊಳ್ಳಬೇಕು, ಕುಡಿತವನ್ನು ಬಿಡುವ ಬಗ್ಗೆ ಸ್ವಯಂ ಸಂಕಲ್ಪ ಮಾಡಬೇಕು ಎಂದು ಸಲಹೆ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ವ್ಯಸನ ಮುಕ್ತರಾದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಗಾಂಧೀ ಜಯಂತಿ ಪ್ರಯುಕ್ತ ನಡೆಸಲಾದ ಚರ್ಚಾ ಗೋಷ್ಠಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯೋಜನೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು, ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಅರವಿಂದ ಸೋಮಯಾಜಿ, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಉಪಾಧ್ಯಕ್ಷ ಸುಧೀರ್, ಆಜಾóದ್ ಪಾರ್ಕ್ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಎನ್.ಈಶ್ವರಪ್ಪ, ಶ್ರೀದೇವಿ ಮೋಹನ್, ಹಸನ್ ಬಾವಾ, ತೇಗೂರು ಜಗದೀಶ್, ಎ.ಸಿ.ಚಂದ್ರಪ್ಪ, ಶಿವಲಿಂಗಸ್ವಾಮಿ, ವಿಶ್ವನಾಥ್ ಉಪಸ್ಥಿತರಿದ್ದರು.
ವಿಠಲ್ ಪೂಜಾರಿ ಮತ್ತು ಡಿ.ದಿನೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಸ್ವಾಗತಿಸಿದರು, ತಾಲ್ಲೂಕು ಯೋಜನಾಧಿಕಾರಿ ಸುನೀತಾ ಪ್ರಭು ವಂದಿಸಿದರು.