ಚಿಕ್ಕಮಗಳೂರು: ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯ ಸರ್ಕಾರದ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ಬಯಲುಸೀಮೆಗೆ ನೀರುಣಿಸುವ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.ಬೆಂಗಳೂರಿನಿಂದ ಬೆಳಿಗ್ಗೆ ಆಗಮಿಸಿದ ಅಧಿಕಾರಿಗಳ ತಂಡ ಮೊದಲು ದೇವಿಕೆರೆಗೆ ತೆರಳಿ ವೀಕ್ಷಿಸಿತು, ನಂತರ ಕರಗಡ ಕುಡಿಯುವ ನೀರಿನ ಯೋಜನೆಯಡಿ ನಿರ್ಮಿಸಿರುವ ಕಾಲುವೆಯುದ್ದಕ್ಕೂ ಆರು ಕಿ.ಮೀ ನಷ್ಟು ದೂರ ಕಾಲ್ನಡಿಗೆಯಲ್ಲಿ ತೆರಳಿ ಮಧ್ಯಾಹ್ನದವರೆಗೆ ಕಾಮಗಾರಿಯ ಪರಿಶೀಲನೆ ನಡೆಸಿತು.ಕಾಲುವೆಯುದ್ದಕ್ಕೂ ಆಳೆತ್ತರದ ಹುಲ್ಲು ಬೆಳೆದಿರುವುದು ಹಲವಡೆ ಬಂಡೆ ಮತ್ತು ಮಣ್ಣು ಕುಸಿದು ಹರಿಯುವ ನೀರಿಗೆ ತಡೆಯಾಗಿರುವುದು ಈ ವೇಳೆ ಕಂಡು ಬಂತು.ಅಲ್ಲಲ್ಲಿ ಕಾಲುವೆಯೊಳಗೆ ಇಳಿದು ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಕಾಮಗಾರಿಯಲ್ಲಿ ಕೆಲವು ಲೋಪವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಯೋಜನೆ ಮತ್ತು ಕಾಮಗಾರಿಯ ಕುರಿತು ಅಧಿಕಾರಿಗಳ ತಂಡಕ್ಕೆ ವಿವರ ನೀಡಿದರು, ಯೋಜನೆಯಲ್ಲಿ ಈಗಾಗಿರುವ ಲೋಪಗಳನ್ನು ಸರಿಪಡಿಸಿ ಮುಂದಿನ ಹಂತದ ಕಾಮಗಾರಿಯನ್ನು ನಡೆಸುವ ಕುರಿತು ಧರ್ಮೇಗೌಡರೊಂದಿಗೆ ಅಧಿಕಾರಿಗಳು ಚರ್ಚೆ ನಡೆಸಿದರು.
ಇದೇ ವೇಳೆ ಭೇಟಿ ಕುರಿತು ವಿವರ ನೀಡಿದ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಕರಗಡ ಕುಡಿಯುವ ನೀರಿನ ಯೋಜನೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ ಜಿಲ್ಲೆಯ ಬಯಲುಸೀಮೆಗೆ ಶಾಶ್ವತವಾಗಿ ಕುಡಿಯುವ ನೀರನ್ನು ಹರಿಸುವಂತೆ ಮುಖ್ಯಮಂತ್ರಿಗಳು ನೀಡಿದ ಸೂಚನೆ ಮೇರೆಗೆ ತಾವುಗಳು ಆಗಮಿಸಿ ಪರಿಶೀಲನೆ ನಡೆಸಿದ್ದೇವೆ ಎಂದರು.ಕಾಲುವೆ ಗೋಡೆಗಳನ್ನು ನಿರ್ಮಾಣ ಮಾಡುವುದು ಅಥವಾ ಅವಶ್ಯಕತೆ ಬಿದ್ದಲ್ಲಿ ನೀರನ್ನು ಪೈಪ್ ಮುಖಾಂತರ ಹರಿಸುವ ಬಗ್ಗೆ ರೂಪುರೇಶೆ ತಯಾರಿಸಿಲಾಗುವುದು ಎಂದು ಹೇಳಿದರು.ಯೋಜನೆ ಕಾಮಗಾರಿ ಕುರಿತು ವರದಿ ಸಲ್ಲಿಸಲು ಮುಖ್ಯಮಂತ್ರಿಗಳು ಮೂರು ತಿಂಗಳ ಗಡುವು ನೀಡಿದ್ದು, ಅಷ್ಟರೊಳಗೆ ಹಿಂದೆ ಆಗಿರುವ ಸಣ್ಣಪುಟ್ಟ ಲೋಪದೋಶಗಳನ್ನು ಸರಿಪಡಿಸುವುದರ ಜೊತೆಗೆ ಮುಂದಿನ ಹಂತದ ಕಾಮಗಾರಿಯನ್ನು ಯಾವ ರೀತಿ ಮಾಡಬೇಕೆಂಬ ಬಗ್ಗೆ ರೂಪುರೇಶೆ ಮತ್ತು ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಮಾತನಾಡಿ ನೆನೆಗುದಿಗೆ ಬಿದ್ದಿರುವ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜಿಲ್ಲೆಯ ಬಯಲುಸೀಮೆಗೆ ನೀರು ಹರಿಸುವಂತೆ ಒತ್ತಾಯಿಸಿ ಸ್ಥಳೀಯ ರೈತರು ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರೊಂದಿಗೆ ತಾವು ಮತ್ತು ತಮ್ಮ ಸಹೋದರ ಎಸ್.ಎಲ್.ಭೋಜೇಗೌಡ ಇತ್ತೀಚೆಗೆ ನಿಯೋಗ ತೆರಳಿದ್ದ ವೇಳೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಂತೆ ಇದೀಗ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದಾರೆ ಎಂದು ಹೇಳಿದರು.ಅಧಿಕಾರಿಗಳು ವರದಿ ಸಲ್ಲಿಸಿದ ಕೂಡಲೇ ಮತ್ತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಸಣ್ಣನೀರಾವರಿ ಇಲಾಖೆಯ ಮುಖ್ಯ ಅಭಿಯಂತ ಎಂ.ರವೀಂದ್ರಪ್ಪ, ಅಧೀಕ್ಷಕ ಇಂಜಿನಿಯರ್ ಶಶಿಧರ್, ನಿವೃತ್ತ ಮುಖ್ಯ ಅಧೀಕ್ಷಕ ಬಸವರಾಜ್ ಕೋಟಿ, ನಿವೃತ್ತ ಮುಖ್ಯ ಇಂಜಿನಿಯರ್ ನಂಜುಂಡಸ್ವಾಮಿ, ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಬುರ್ಜಿ, ಪ್ರಧಾನ ಅಧೀಕ್ಷಕ ಚಂದ್ರಶೇಖರಯ್ಯ ತಂಡದಲ್ಲಿದ್ದರು.










