ಡಾ.ಜಿ.ಪರಮೇಶ್ವರ್ ಮತ್ತು ನನ್ನ ನಡುವೆ  ಭಿನ್ನಾಭಿಪ್ರಾಯವೇ ಇಲ್ಲ: ಸಿದ್ದರಾಮಯ್ಯ ಸರಣಿ ಟ್ವಿಟ್…

620
firstsuddi

ಬೆಂಗಳೂರು:  ವೇಣುಗೋಪಾಲ್​ ನೇತೃತ್ವದಲ್ಲಿ  ನಿನ್ನೆ ನಡೆದ ಸಭೆಯಲ್ಲಿ  ಸಿದ್ದರಾಮಯ್ಯ ಮತ್ತು ಪರಮೇಶ್ವರ್​ ನಡುವೆ  ವಾಗ್ವಾದ ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ  ಸಿದ್ದರಾಮಯ್ಯ ಅವರು ಸರಣಿ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಡಾ.ಜಿ.ಪರಮೇಶ್ವರ್ ಮತ್ತು ನನ್ನ ನಡುವೆ  ಭಿನ್ನಾಭಿಪ್ರಾಯವೇ ಇಲ್ಲ, ನಿನ್ನೆಯ ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ-ವಾಗ್ವಾದ ನಡೆದಿಲ್ಲ. ಇದನ್ನು ಹೇಳಿದವರು ಯಾರು? ವಿರೋಧ ಪಕ್ಷಗಳ ಕೆಲವು ನಾಯಕರು ಹತಾಶರಾಗಿ ಹರಡುತ್ತಿರುವ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡುವ ಮೊದಲು ಪರಾಮರ್ಶಿಸಿದರೆ ಒಳ್ಳೆಯದು ಎಂದಿದ್ದಾರೆ.

ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚೆ ಸೌಹಾರ್ದತಯುತವಾಗಿಯೇ ನಡೆದಿದೆ. ಸಭೆಯಲ್ಲಿದ್ದ ನಾಯಕರೆಲ್ಲ ಹಿರಿಯರು, ಅನುಭವಿಗಳು, ಈ ರೀತಿ ಜಗಳವಾಡಲು ನಮ್ಮಲ್ಲಿ ಯಾರೂ ಮಕ್ಕಳಿಲ್ಲ. ಕಪೋಲ ಕಲ್ಪಿತ ಸುದ್ದಿಗಳನ್ನು ನಂಬಬೇಡಿ, ಹರಡಬೇಡಿಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ. 

 

ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಎಲ್ಲ ನಾಯಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕೆ.ಸಿ.ವೇಣುಗೋಪಾಲ್ ಅವರು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತಾರೆ. ಅಂತಿಮ ತೀರ್ಮಾನವನ್ನು ರಾಹುಲ್ ಗಾಂಧಿ ಕೈಗೊಳ್ಳುತ್ತಾರೆ.

ನಾನು ಮುಖ್ಯಮಂತ್ರಿಯಾಗಿದ್ದ ೫ ವರ್ಷಗಳ ಕಾಲ ನನ್ನ ಮತ್ತು ಡಾ.ಪರಮೇಶ್ವರ್ ಸಂಬಂಧ ಕೆಡಿಸುವ ಪ್ರಯತ್ನವನ್ನು ವಿರೋಧ ಪಕ್ಷಗಳ ನಾಯಕರು ಮಾಡುತ್ತಲೇ ಇದ್ದರು. ಅದು ಈಗಲೂ ಮುಂದುವರಿದಿದೆ. ಅಂತಹ ಯಾವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ. ಇಂತಹ ಸುದ್ದಿಗಳನ್ನು ಕೇಳಿ ನಾವಿಬ್ಬರೂ ನಕ್ಕು ಸುಮ್ಮನಾಗುತ್ತೇವೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.