ಬೆಂಗಳೂರು : ರಾಜ್ಯದಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಶಾಲಾ-ಕಾಲೇಜು ಆರಂಭ ಕುರಿತು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ತಜ್ಞರು ಡಿಸೆಂಬರ್ ಅಂತ್ಯದವರೆಗೂ ಶಾಲಾ-ಕಾಲೇಜು ಆರಂಭಿಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದು, ಇದರಿಂದಾಗಿ ಡಿಸೆಂಬರ್ ಅಂತ್ಯದವರೆಗೂ ಶಾಲಾ-ಕಾಲೇಜು ಆರಂಭಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಸಭೆ ಪ್ರಾರಂಭದಲ್ಲಿ ಡಿಗ್ರಿ ಕಾಲೇಜುಗಳ ಬಗ್ಗೆ ಚರ್ಚೆ ನಡೆಯಿತು. ಎಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಿದ್ದಾರೆ. ಟೆಸ್ಟ್ ಮಾಡಿಸಿದಾಗ ಎಷ್ಟು ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಅನ್ನೋದ್ರ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ವರದಿಯನ್ನು ಸಚಿವ ಸುರೇಶ್ ಕುಮಾರ್ ಅವರು ಸಿಎಂಗೆ ಸಲ್ಲಿಕೆ ಮಾಡಿದರು. ಶಾಲೆ ಪ್ರಾರಂಭ ಕುರಿತು ವರದಿಯನ್ನು ಆಯುಕ್ತ ಅನ್ಬುಕುಮಾರ್ ರೆಡಿ ಮಾಡಿದ್ದರು. ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಯಿತು.
ಹೈದರಾಬಾದ್ ನಲ್ಲಿರುವ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡು, ಡಿಸೆಂಬರ್ ಅಂತ್ಯದವರೆಗೂ ಶಾಲೆ ಬೇಡ ಎಂದು ಸಭೆಗೆ ತಮ್ಮ ಅಭಿಪ್ರಾಯ ತಿಳಿಸಿದರು. ಡಿಸೆಂಬರ್ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಶುರುವಾಗುವ ಸಾಧ್ಯತೆ ಇದೆ. ಇದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಿದೆ. ನಮ್ಮ ರಾಜ್ಯದ ಹವಾಮಾನದಲ್ಲಿ ಬದಲಾವಣೆ ಆಗುತ್ತಿದೆ. ಈಗಾಗಲೇ ಚಳಿಗಾಲ ಶುರುವಾಗ್ತಿದೆ. ತಜ್ಞರು ಕೂಡ ಡಿಸೆಂಬರ್ ವರೆಗೆ ಶಾಲೆ ಬೇಡ ಅಂದಿದ್ದಾರೆ. ಹೀಗಾಗಿ ಡಿಸೆಂಬರ್ ಕೊನೆಯವರೆಗೂ ಶಾಲಾ ಕಾಲೇಜು ಓಪನ್ ಮಾಡುವುದು ಸೂಕ್ತವಲ್ಲ ಎಂದು ಸುಧಾಕರ್ ಅವರು ತಿಳಿಸಿದರು.










