ಸಾವಿರಾರು ಗಾಂಧಿಗಳು, ಲಕ್ಷಾಂತರ ಮೋದಿಗಳು, ಒಟ್ಟುಗೂಡಿದರೂ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ಸಾಧ್ಯವಿಲ್ಲ

577

ನವದೆಹಲಿ:  ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಒಂದು ಸರಕಾರದಿಂದ ಏನೂ ಆಗುವುದಿಲ್ಲ. ಎಲ್ಲರೂ ಕೈಜೋಡಿಸಿದರೆ ಗುರಿ ಮುಟ್ಟುಬಹುದು ಎಂಬ ಸಂದೇಶವನ್ನು ನರೇಂದ್ರ ಮೋದಿ ದೇಶಕ್ಕೆ ನೀಡಿದ್ದಾರೆ. ಸ್ವಚ್ಛ ಭಾರತ ಆಂದೋಲನದ ಬಗ್ಗೆ ಮಾತನಾಡಿದ ಪ್ರಧಾನಿಗಳು, ದೇಶದ 125 ಕೋಟಿ ಜನರಿಂದ ಮಾತ್ರ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಾತ್ಮ ಗಾಂಧಿ ಮತ್ತು ಲಾಲ್’ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಸ್ವಚ್ಛ ಭಾರತ ಯೋಜನೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

“ಸಾವಿರಾರು ಮಹಾತ್ಮ ಗಾಂಧಿಗಳು, ಲಕ್ಷಾಂತರ ನರೇಂದ್ರ ಮೋದಿಗಳು, ದೇಶದ ಎಲ್ಲ ಮುಖ್ಯಮಂತ್ರಿಗಳು, ಸರಕಾರಗಳು ಒಟ್ಟುಗೂಡಿದರೂ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ಸಾಧ್ಯವಿಲ್ಲ. ಆದರೆ, 125 ಕೋಟಿ ಭಾರತೀಯರು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಬಲ್ಲರು,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೂರು ವರ್ಷಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಸಾಕಷ್ಟು ಯಶಸ್ವಿಯಾಗಿದೆ. ಸ್ವಚ್ಛತಾ ಶ್ರೇಯಾಂಕದಲ್ಲಿ ನಡೆಯುತ್ತಿರುವ ತುರುಸಿನ ಪೈಪೋಟಿಯೇ ಇದಕ್ಕೆ ಸಾಕ್ಷಿ, ಎಂದು ಮೋದಿ ತಿಳಿಸಿದ್ದಾರೆ.

ಸ್ವಚ್ಛ ಭಾರತ ಕಾರ್ಯಕರ್ತರನ್ನು ಸ್ವಚ್ಛಾಗ್ರಹಿಗಳೆಂದು ಬಣ್ಣಿಸಿದ ಮೋದಿ, ಇಂಥ ಸ್ವಚ್ಛಾಗ್ರಹಿಗಳ ಸಿದ್ಧಿಯಿಂದಾಗಿ ಸ್ವಚ್ಛ ಭಾರತ ಅಭಿಯಾನವು ಜನಾಂದೋಲನವಾಗಿ ರೂಪುಗೊಂಡಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಚಾಲನೆಗೊಂಡ ಸ್ವಚ್ಛ ಭಾರತ ಯೋಜನೆಯಂತೆ 2019ರಷ್ಟರಲ್ಲಿ ದೇಶದಲ್ಲಿ ಸಂಪೂರ್ಣ ಬಹಿರ್ದೆಸೆಮುಕ್ತ ವಾತಾವರಣವಿರಬೇಕು, ಪ್ರತಿಯೊಂದು ಸ್ಥಳವೂ ಸ್ವಚ್ಛವಾಗಿರಬೇಕು ಎಂಬ ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಳ್ಳಲಾಗಿದೆ. 2019ರಂದು ಮಹಾತ್ಮ ಗಾಂಧಿಯವರ 150ನೇ ಜಯಂತಿಯಾದ್ದರಿಂದ ಸ್ವಚ್ಛ ಭಾರತದ ಮೂಲಕ ಅವರಿಗೆ ಗೌರವ ಸಲ್ಲಿಸುವುದು ಪ್ರಧಾನಿಗಳ ಉದ್ದೇಶವಾಗಿದೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ ಘಾಟ್ ಮತ್ತು ವಿಜಯ್ ಘಾಟ್’ಗೆ ತೆರಳಿ ಮಹಾತ್ಮ ಗಾಂಧಿ ಮತ್ತು ಶಾಸ್ತ್ರಿ ಅವರಿಗೆ ನಮನ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here