ಕಂಪ್ಲಿ ಶಾಸಕ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ…

242
firstsuddi

ಬೆಂಗಳೂರು: ಶಾಸಕ ಆನಂದ ಸಿಂಗ್ ಅವರ ಮೇಲೆ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ರಾಮನಗರ ಸಿಜೆಎಂ ನ್ಯಾಯಾಲಯ ಗಣೇಶ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಈಗಲ್​ಟನ್​ ರೆಸಾರ್ಟ್​​ನಲ್ಲಿ ಜನವರಿ 20ರಂದು  ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ  ಗಣೇಶ್ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಅಂದಿನಿಂದ ಕಂಪ್ಲಿ ಶಾಸಕ ಗಣೇಶ್ ಅವರು ತಲೆ ಮರೆಸಿಕೊಂಡಿದ್ದರು.  ಗಣೇಶ್ ಅವರನ್ನು ಬಿಡದಿ ಪೊಲೀಸರು  ನಿನ್ನೆ ಗುಜರಾತ್ ನಲ್ಲಿ ಬಂಧಿಸಿದ್ದು, ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಿಡದಿ ಠಾಣೆಗೆ ಪೊಲೀಸರು ಕರೆದುಕೊಂಡು ಬಂದು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಡದಿ ಪೊಲೀಸ್ ಠಾಣೆಯಲ್ಲಿ  ವಿಚಾರಣೆಗೊಳಪಡಿಸಿ ನಂತರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ಹಿನ್ನೆಲೆಯಲ್ಲಿ ಸಿಜೆಎಂ ನ್ಯಾಯಾಲಯ ​  ಗಣೇಶ್​​ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಗಣೇಶ್ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.