ಚಿಕ್ಕಮಗಳೂರು : ಮಳೆಯಿಂದ ರಕ್ಷಣೆ ಪಡೆಯಲು ಮರದಡಿಯಲ್ಲಿ ನಿಂತಿದ್ದ ರೈತರೋರ್ವರು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಲಕ್ಷ್ಮಯ್ಯ 52 ಮೃತಪಟ್ಟ ದುರ್ದೈವಿ, ಸಂಜೆ 4.30ಕ್ಕೆ ಲಕ್ಷ್ಮಯ್ಯ ಅವರು ಹೊಲದಲ್ಲಿ ಅವರೆಕಾಯಿ ಕುಯ್ಯುತ್ತಿದ್ದ ವೇಳೆ ಮಳೆ ಬೀಳಲು ಆರಂಭಿಸಿದೆ, ತಕ್ಷಣ ಅಲ್ಲಿಂದ ಓಡಿದ ಅವರು ರಕ್ಷಣೆಗಾಗಿ ಸಮೀಪದಲ್ಲೇ ಈಶ್ವರ ದೇವಾಲಯದ ಬಳಿ ಇದ್ದ ಮರದಡಿಯಲ್ಲಿ ನಿಂತಿದ್ದರು.
ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟರು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಲಕ್ಷ್ಮಯ್ಯ ಅವರ ಕುಟುಂಭ ವರ್ಗದವರಿಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.