ಯಾವುದೇ ಆಮಿಷಕ್ಕೂ ಒಳಗಾಗದೇ ಮತದಾನ ಮಾಡಬೇಕು :ಹಿರೇಮಗಳೂರು ಕಣ್ಣನ್…

264
firstsuddi

ಚಿಕ್ಕಮಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯ ಉಳಿಯಬೇಕಾದರೆ ಪ್ರತಿಯೊಬ್ಬರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಲಹೆ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಘಟಕ ನಗರದ ಶಂಕರಮಠದ ಪ್ರವಚನ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಹಾಗೂ ಪತ್ರಿಕೋದ್ಯಮ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವಪೂಜೆಗಿಂತ ದೇಶಪೂಜೆ ದೊಡ್ಡದು, ದೇಶ ಉಳಿದರೆ ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯ ಉಳಿಯುತ್ತದೆ, ಪ್ರಜಾಪ್ರಭುತ್ವದ ಉಳಿವು ಯುವಜನತೆಯ ಕೈಯಲ್ಲಿದೆ, ಎಲ್ಲಿಯವರೆಗೆ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡುವುದಿಲ್ಲವೋ ಅಲ್ಲಿಯವರೆಗೂ ರಾಷ್ಟ್ರ ಮುಂದುವರೆಯಲು ಸಾಧ್ಯವಿಲ್ಲ ಎಂದರು.
ಮತ ಎಂದರೆ ಜಾತಿಯಲ್ಲ ಅದು ಅಭಿಪ್ರಾಯ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು, ಮತದಾನ ನಮ್ಮ ಧರ್ಮವಾಗಬೇಕು ಹಣಕ್ಕೆ ನಮ್ಮ ವ್ಯಕ್ತಿತ್ವವನ್ನು ಮಾರಿಕೊಳ್ಳಬಾರದು ಯಾವುದೇ ಆಮಿಷಕ್ಕೂ ಒಳಗಾಗದೇ ಮತದಾನ ಮಾಡಬೇಕು ಎಂದ ಅವರು ನಮ್ಮನ್ನು ಸಾಕಿ ಸಲಹುತ್ತಿರುವ ಭಾರತ ಮಾತೆಗೆ ನಾವು ನೀಡಬಹುದಾದ ಅತ್ಯಮೂಲ್ಯ ದಾನವೆಂದರೆ ಅದು ಮತದಾನ ಮಾತ್ರ ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಮಾತನಾಡಿ ಯವಜನತೆ ಚುನಾವಣೆಯ ದಿನ ಮತದಾನದ ಅಂತಿಮ ಗಳಿಗೆಯವರೆಗೂ ಕಾಯಬಾರದು ಆದಷ್ಟು ಬೇಗ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡುವುದರ ಜೊತೆಗೆ ಉಳಿದವರಿಗೂ ಮತ ಹಾಕಲು ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಪ್ರಕಾಶ್ ವಿದ್ಯಾರ್ಥಿಗಳಲ್ಲಿ ಮತದಾನ ಮತ್ತು ಪತ್ರಿಕೋದ್ಯಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಮಂಜುಳಾ ಹುಲ್ಲಹಳ್ಳಿ ಮತದಾನ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡುವುದರ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಎ.ಮೊದಲಿಯಾರ್, ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಸ್.ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಲಾವಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಶಿವಕುಮಾರ್ ಸ್ವಾಗತಿಸಿದರು, ಸಂಘದ ಗೌರವಾಧ್ಯಕ್ಷ ರಮೇಶ್ ನಾರಿನಿಂಗಜ್ಜಿ ವಂದಿಸಿದರು.