ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡುವ, ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಬಲಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಟಿಪ್ಪು ಜಯಂತಿ ಹಾಗೂ ಬಿಜೆಪಿ ಆರಂಭಿಸಿರುವ ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಟಿಪ್ಪು ಜಯಂತಿ ಆಚರಣೆ ವೇಳೆ ಕೊಡಗಿನಲ್ಲಿ ಹಿಂಸಾಚಾರ ಉಂಟಾಗಿತ್ತು. ಅಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಟಿಪ್ಪು ಸುಲ್ತಾನ್ ಒಬ್ಬ ದೇಶಪ್ರೇಮಿಯಾಗಿದ್ದು, ಹಿಂದು ವಿರೋಧಿಯಾಗಿದ್ದರೆ ಮೈಸೂರಿನ ನಂಜನಗೂಡು ಮತ್ತು ಶೃಂಗೇರಿಯ ದೇವಸ್ಥಾನಕ್ಕೆ ನೆರವು ನೀಡುತ್ತಿದ್ದಾರಾ?, ಟಿಪ್ಪು ಬಗ್ಗೆ ರಾಷ್ಟ್ರಪತಿ ಅವರು ಸರಿಯಾಗಿಯೇ ಇತಿಹಾಸ ಹೇಳಿದ್ದಾರೆ ಎಂದರು. ಅಹಿತಕರ ಘಟನೆ ನಡೆದರೆ ಪೊಲೀಸರೇ ಹೊಣೆ : ಟಿಪ್ಪು ಜಯಂತಿ ಹಾಗೂ ಬಿಜೆಪಿ ಯಾತ್ರೆ ವೇಳೆ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಸಿಎಂ ಎಚ್ಚರಿಸಿದರು.