ಪಾಶ್ಚಿಮಾತ್ಯರ ಚಿತ್ತ ಭಾರತದ ಸಂಸ್ಕೃತಿಯತ್ತ, ಭಾರತದ ಯುವಜನತೆ ಮೋಜಿನತ್ತ…

784
firstsuddi
  • ರಾಘವೇಂದ್ರ ಕೆಸವಳಲು

ಸೆಪ್ಟೆಂಬರ್ 11, 1893 ಭಾರತದ ಇತಿಹಾಸದಲ್ಲಿ ಮರೆಯಲಾಗದ ದಿನ. ಅಂದು ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ್ದರು. ಕೆಲವೇ ನಿಮಿಷಗಳ ಭಾಷಣದ ಮೂಲಕ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ಸ್ವಾಮಿ ವಿವೇಕಾನಂದರ ಹೆಗ್ಗಳಿಕೆ. ಹಲವು ಧರ್ಮಗಳಿಗೆ ಮಾತೃಭೂಮಿ ಭರತ ಖಂಡ, ತನ್ನ ಸಹಿಷ್ಣುತೆಯಿಂದ ಜಗತ್ತಿನ ಎಲ್ಲಾ ಧರ್ಮಗಳಿಗೂ ಆಶ್ರಯತಾಣವಾಗಿರುವ ಪುಣ್ಯ ಭೂಮಿಯ ಹಿರಿಮೆಯ ಜೊತೆಗೆ ಜಗತ್ತಿಗೆ ಅದರ ಕೊಡುಗೆಯಾಗಿರುವ ಹಲವಾರು ತತ್ವಗಳನ್ನು ಅಂದು ವಿವೇಕಾನಂದರು ಅಮೇರಿಕಾದ ನೆಲದಲ್ಲಿ ಪರಿಚಯಿಸಿದ್ದರು. ಮುಂದೆ ಯೋಗಾಭ್ಯಾಸ ಹಾಗೂ ಅದರ ಅಧ್ಯಯನಗಳು ಅಮೇರಿಕಾದಲ್ಲಿ ಅವಿರತವಾಗಿ ನಡೆದವು. ಇಂದು ಕೂಡ ನಡೆಯುತ್ತಲೇ ಇವೆ.

firstsuddi

ಯೋಗಾಭ್ಯಾಸದಿಂದ ಮನೋಸ್ವಾಸ್ಥ್ಯದ ಮೇಲೆ ಆಗುವ ಪರಿಣಾಮಗಳು ಮತ್ತು ಇದರ ಅಪರಿಮಿತ ಪ್ರಯೋಜನಗಳನ್ನು ಮನಗೊಂಡಿರುವ ಪ್ರಪಂಚದ ಹಲವಾರು ದೇಶಗಳು ಇಂದು ಜಗತ್ತಿಗೆ ಯೋಗವನ್ನು ಕೊಡುಗೆಯಾಗಿತ್ತ ಭಾರತ ದೇಶದ ಸಂಸ್ಕೃತಿ, ಪುರಾಣ ಹಾಗೂ ತತ್ವಶಾಸ್ತ್ರಗಳ ಅಧ್ಯಯನದ ಕಡೆಗೆ ಅಪಾರ ಆಸಕ್ತಿಯನ್ನು ತಳೆದಿವೆ.
20ನೇ ಶತಮಾನದಲ್ಲಿ ಭಾರತ ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿ ಸಾಕಷ್ಟು ಸಾಧನೆಗಳನ್ನೂ ಕೂಡ ಮಾಡಿದೆ. ಜಾಗತೀಕರಣಗೊಂಡಂತೆಲ್ಲಾ ಪಾಶ್ಚಿಮಾತ್ಯ ದೇಶಗಳ ಶಿಕ್ಷಣ ಪದ್ಧತಿ, ಆಹಾರ ಕ್ರಮ, ಉಡುಗೆ ತೊಡುಗೆ ಇವೆಲ್ಲವೂ ಕೂಡ ಭಾರತದ ಮಧ್ಯಮ ಹಾಗೂ ಮೇಲ್ವರ್ಗದ ಜನರ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿವೆ.
ಬದಲಾವಣೆ ಎಂಬುದು ಜಗದ ನಿಯಮ ಆದರೆ ವಿಜ್ಞಾನ ಹಾಗೂ ತಂತ್ರಜ್ಞಾನದ ಉನ್ನತಿಯ ಜೊತೆಗೆ ಮಿತಿಮೀರಿದ ಆಧುನಿಕ ಜೀವನ ಶೈಲಿ ಭಾರತದ ಯುವ ಜನತೆಯನ್ನು ದಿಕ್ಕು ತಪ್ಪಿಸಿರುವುದು ಅತಂಕದ ಸಂಗತಿ.
ಪ್ರಸ್ತುತ ಸಮಾಜದಲ್ಲಿ ಲಿಂಗ ಸಮಾನತೆ, ಮೌಢ್ಯಗಳ ನಿವಾರಣೆ, ನೈರ್ಮಲ್ಯ, ಮಹಿಳಾ ಸಬಲೀಕರಣ, ಹೆಚ್ಚುತ್ತಿರುವ ಸಾಕ್ಷರತೆ ಇವೆಲ್ಲಾ ಆರೋಗ್ಯದಾಯಕ ಬೆಳವಣಿಗೆಯಾದರೆ, ಇದೇ ಸುಶಿಕ್ಷಿತ ವಲಯದ ಮಂದಿ ಲಿಂಗ ಬೇಧವಿಲ್ಲದೆ ಮಾದಕ ವ್ಯಸನಗಳಿಗೆ ತುತ್ತಾಗಿ ತಡರಾತ್ರಿಯ ಮೋಜಿನ ಕೂಟಗಳಲ್ಲಿ ತಮ್ಮ ಆಧುನಿಕತೆಯ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಸ್ತ್ರೀಯರಿಗೆ ಗೌರವವನ್ನು ತುಂದುಕೊಡುತ್ತಿದ್ದ ಸಾಂಪ್ರದಾಯಿಕ ಉಡುಗೆಗಳ ಸ್ಥಳವನ್ನು ಇಂದು ತುಂಡುಡುಗೆಗಳು ಆಕ್ರಮಿಸಿವೆ. ನೈತಿಕತೆಯ ಅರಿವಿಲ್ಲದ ಜೀವನ ಶೈಲಿ ಯುವಜನತೆಯ ಮನೋದೈಹಿಕ ಸ್ವಾಸ್ಥ್ಯವನ್ನು ಇನ್ನಿಲ್ಲದಂತೆ ಹಾಳುಗೆಡವಿದೆ.

firstsuddi

ಇನ್ನು ಸಾಮಾಜಿಕ ಜಾಲತಾಣಗಳೊಂದಿಗೆ ಅಪ್ ಡೇಟ್ ಆಗಬೇಕೆನ್ನುವ ಗೀಳು ಮಾದಕವಸ್ತುಗಳ ಚಟಕ್ಕಿಂತಲೂ ಮಿಗಿಲಾದ ಗೀಳಾಗಿದೆ. ಪ್ರತಿನಿಮಿಷವೂ ತಮ್ಮ ಅಮೂಲ್ಯ ಸಮಯವನ್ನು ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಮ್ ಮುಂತಾದವುಗಳಲ್ಲಿ ಕಳೆಯುವ ಯುವ ಜನತೆ ಕೊನೆಗೆ ಪಡೆಯುವ ಲಾಭವೇನೆಂದು ನೋಡಿದರೆ ಶೂನ್ಯ.
ಇವೆಲ್ಲದರ ದುಷ್ಟರಿಣಾಮಗಳ ಬಗೆಗೆ ಜಾಗೃತಗೊಂಡಿರುವ ಪಾಶ್ಚಿಮಾತ್ಯರು ಯೋಗ, ಧ್ಯಾನಗಳ ಮುಂಖಾಂತರ ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳುವ ಸಲುವಾಗಿ ಭಾರತದ ಪಾರಂಪರಿಕ ತಾಣಗಳಿಗೆ ಬಂದಿಳಿಯುತ್ತಿದ್ದಾರೆ. ಭಾರತದ ಸಾಂಪ್ರದಾಯಿಕ ಉಡುಗೆ ಮತ್ತು ಆಹಾರ ಕ್ರಮಗಳನ್ನು ಅನುಸರಿಸುತ್ತಾ, ಇಲ್ಲಿನ ಪೌರಾಣಿಕ ಹಿನ್ನಲೆಯ ಅಧ್ಯಯನ ನಡೆಸುತ್ತಾ ಭವಿಷ್ಯದ ಭದ್ರ ಬುನಾದಿಗೆ ನಾಂದಿ ಹಾಡಿದ್ದಾರೆ.
ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮ ಅಮೂಲ್ಯವಾದ ಸಂಸ್ಕೃತಿ ಹಾಗೂ ಪರಂಪರೆಯನ್ನು ಗಾಳಿಗೆ ತೂರಿ ಅಪ್ ಡೇಶನ್ ಎನ್ನುವ ಗೀಳುಹತ್ತಿಸಿಕೊಂಡಿರುವ ಭಾರತದ ಯುವ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಆಧುನೀಕರಣವೆನ್ನುವುದು ಜೀವನದಲ್ಲಿ ಬೌದ್ಧಿಕವಾಗಿರಬೇಕೇ ಹೊರತು ನಮ್ಮ ಉಡುಗೆ ತೊಡುಗೆ ಅಥವಾ ವ್ಯಸನದ ಮೋಜಾಗಬಾರದು.
ಒಮ್ಮೆ ಯೋಚಿಸಿ ನೋಡಿ ಸಮಾಜ ಸುಧಾರಕ ಬಸವಣ್ಣ, ಶಾಂತಿ ಮತ್ತು ಸತ್ಯದ ಮಂತ್ರ ಸಾರಿದ ಬುದ್ಧ, ಮಹಿಳಾ ಶಿಕ್ಷಣ ಹಾಗೂ ಸಬಲೀಕರಣಕ್ಕಾಗಿ ಶ್ರಮಿಸಿದ ಸಾವಿತ್ರಿ ಭಾಯಿ ಫುಲೆ, ರಾಜಾರಾಮ್ ಮೋಹನ್ ರಾಯ್, ಇವರೆಲ್ಲಾ ಆಧುನಿಕತೆಯ ಉತ್ತುಂಗದ ನೇತಾರರಂತೆ ಕಾಣುತ್ತಾರೆ.