ಚಿಕ್ಕಮಗಳೂರು: ದೇವಾಲಯಗಳು ಮನಸ್ಸಿನ ದುಗುಡವನ್ನು ಕಳೆದು ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಪವಿತ್ರ ಕೇಂದ್ರಗಳು ಎಂದು ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಹೇಳಿದರು.
ನಗರದ ಶ್ರೀ ಮಹಾಲಕ್ಷ್ಮಿಶಕ್ತಿ ಗಣಪತಿ ದೇವಾಲಯದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವಾಲಯಗಳಿಗೆ ತೆರಳುವುದರಿಂದ ಮನಸ್ಸಿನ ದುಗುಡ ನಿವಾರಣೆಯಾಗಿ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ, ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಭಾವೈಕ್ಯತೆ ಬೆಳೆಯುತ್ತದೆ ಎಂದರು.
ದೈವಾನುಗ್ರಹ ಇಲ್ಲದೇ ಯಾರೂ ಬೆಳೆಯಲು ಸಾಧ್ಯವಿಲ್ಲ ಎಂದ ಅವರು ತಾವು ರಾಜಕೀಯವಾಗಿ ಬೆಳೆದು ಅನೇಕ ಹುದ್ದೆಗಳನ್ನು ನಿಭಾಯಿಸಿರುವುದಕ್ಕೆ ದೈವಕೃಪೆಯೇ ಕಾರಣ ಎಂದು ತಿಳಿಸಿದರು.
ದೇವಾಲಯದ ಸಭಾಂಗಣ ನಿರ್ಮಾಣಕ್ಕೆ ಹಾಗೂ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ತಮ್ಮ ಎಂಎಲ್‍ಸಿ ನಿಧಿಯಿಂದ ತಲಾ ಐದು ಲಕ್ಷ ರೂ ಅನುದಾನ ಒದಗಿಸುವ ಭರವಸೆ ನೀಡಿದರು.
ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್‍ಕುಮಾರ್ ಮಾತನಾಡಿ ದೇವಾಲಯಗಳ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕಾಮಧೇನು ಗಣಪತಿ ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್.ನಂಜುಂಡಸ್ವಾಮಿ ದೇವಾಲಯದ ಸಭಾಂಗಣ ನಿರ್ಮಾಣಕ್ಕೆ ಮತ್ತು ಆಶಾಕಿರಣ ಅಂಧಮಕ್ಕಳ ಶಾಲೆಗೆ ಅನುದಾನ ನೀಡುವಂತೆ ಧರ್ಮೇಗೌಡ ಅವರಿಗೆ ಮನವಿ ಮಾಡಿದರು.
ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವಾರ್ಷಿಕ ಉತ್ಸವದ ಪ್ರಯುಕ್ತ ದೇವಾಲಯದಲ್ಲಿ ಧರ್ಮದರ್ಶಿ ಪಿ.ಎಲ್.ವಿಷ್ಣುಮೂರ್ತಿ ಉಪಾಧ್ಯ ಅವರ ನೇತೃತ್ವದಲ್ಲಿ ಚಂಡಿಕಾ ಹೋಮ, ಮಹಾಗಣಪತಿ ಹೋಮ, ಸುವಾಸಿನಿ ಪೂಜೆ, ಕಲಾತತ್ವ ಹೋಮ, ಕಲಶಾಭಿಷೇಕ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು, ಹೋಮ ಹವನದ ಫಲವನ್ನು ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ಕೃತ್ಯದಲ್ಲಿ ಹುತಾತ್ಮರಾದ ಯೋಧರಿಗೆ ಸಮರ್ಪಿಸಲಾಯಿತು.
ಯಗಟಿ ಠಾಣಾಧಿಕಾರಿ ಸುನೀತ, ಜ್ಞಾನರಶ್ಮಿ ಪ್ರೌಢಶಾಲೆಯ ಸಂಸ್ಥಾಪಕ ನಂದಕುಮಾರ್, ಎಲ್‍ಐಸಿ ಅಭಿವೃದ್ದಿ ಅಧಿಕಾರಿ ವಿನೀತ್ ಕುಮಾರ್ ಉಪಸ್ಥಿತರಿದ್ದರು.










