ಅಂತಾರಾಷ್ಟ್ರೀಯ ಪ್ರಯಾಣಿಕರು ಇನ್ನು ಮುಂದೆ ಏರ್ ಸುವಿಧಾ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ…

61
firstsuddi

ನವದೆಹಲಿ : ವಿದೇಶಗಳಿಂದ ವಿಮಾನದಲ್ಲಿ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ಸಮಯದಲ್ಲಿ ಕಡ್ಡಾಯ ಮಾಡಲಾಗಿದ್ದ ‘ಏರ್ ಸುವಿಧಾ’ ನಿಯಮಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ನಿಯಮ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ವಿದೇಶಗಳಿಂದ ಭಾರತಕ್ಕೆ ಬರುವ ವಿಮಾನ ಪ್ರಯಾಣಿಕರು ಇನ್ನು ಮುಂದೆ ಕೋವಿಡ್-19 ಲಸಿಕೆಗಳನ್ನು ಪಡೆದಿರುವ ಬಗ್ಗೆ ದೃಢೀಕರಣವನ್ನು ನೀಡಲಾಗುವ ಏರ್ ಸುವಿಧಾ ಫಾರ್ಮ್ ಅನ್ನು ಭರಿಸುವ ಅಗತ್ಯವಿರುವುದಿಲ್ಲ. ಅಲ್ಲದೆ, ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು ಎಂಬ ನಿಯಮವನ್ನೂ ಕೈಬಿಡಲಾಗಿದೆ.

ದೇಶೀಯ ವಿಮಾನ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ನಿಯಮವನ್ನು ರದ್ದುಗೊಳಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನೂ ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ ಮತ್ತು ಹೆಚ್ಚಿನ ವ್ಯಾಕ್ಸಿನೇಷನ್ ಪ್ರಮಾಣದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಏನಿದು ಏರ್ ಸುವಿಧಾ?
ಏರ್ ಸುವಿಧಾ ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ತಿಳಿಸಲು ಕಡ್ಡಾಯವಾದ ಸ್ವಯಂ ಘೋಷಣಾ ಫಾರ್ಮ್ ಆಗಿದೆ. ಇದನ್ನು ಪ್ರಯಾಣಿಕರು ಆನ್ ಲೈನ್ ನಲ್ಲಿ ಭರಿಸಲು ವ್ಯವಸ್ಥೆ ಮಾಡಲಾಗಿದೆ. ಇದೀಗ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಈ ನಿಯಮವನ್ನು ಪರಿಶೀಲಿಸಿದೆ.