ನವದೆಹಲಿ : ಅದಾನಿ ವಿಚಾರದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರವಾದ ಹಿನ್ನಲೆ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಸದನ ಆರಂಭವಾಗುತ್ತಿದ್ದಂತೆ ಸಂಸತ್ತಿನ ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಅದಾನಿ ಪ್ರಕರಣ ತನಿಖೆಯಾಗಬೇಕು ಮತ್ತು ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದವು. ಸದನದಲ್ಲಿ ಗದ್ದಲ ಹೆಚ್ಚುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಕಲಾಪವನ್ನು ಮುಂದೂಡಿದರು.
ಸಂಸತ್ ಕಲಾಪಕ್ಕೂ ಮುನ್ನ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಸಹಮತ ವ್ಯಕ್ತವಾಗಲಿಲ್ಲ. ಆಪ್, ಬಿಆರ್ಎಸ್, ಎಸ್ಪಿ ಮತ್ತು ಆರ್ಜೆಡಿ ನಾಯಕರು ಪ್ರತಿಭಟನೆ ತೀವ್ರಗೊಳಿಸಬೇಕೆಂದು ವಾದಿಸಿದರು. ಕಾಂಗ್ರೆಸ್, ಆರ್ಎಸ್ಪಿ ಮತ್ತು ಸಿಪಿಎಂ ಪಕ್ಷಗಳು ಪ್ರಬಲ ಚರ್ಚೆ ನಡೆಸಬೇಕು ಎಂದು ವಾದಿಸಿದವು. ಆದರೆ ಕೊನೆಗೆ ಪ್ರತಿಭಟನೆ ತೀವ್ರಗೊಳಿಸಬೇಕೆಂಬ ಒತ್ತಡಕ್ಕೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ಒಪ್ಪಿದವು.
ಕಲಾಪಕ್ಕೂ ಮುನ್ನ ಸಂಸತ್ ಭವನದ ಎದುರು ಇರುವ ಗಾಂಧಿ ಪ್ರತಿಮೆ ಸಮೀಪ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಅದಾನಿ ಗ್ರೂಪ್ ಅವ್ಯವಹಾರದ ಬಗ್ಗೆ ಜಂಟಿ ಸದನ ಸಮಿತಿ ರಚಿಸಬೇಕು ಅಥವಾ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.










