ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಂಬಲ ವ್ಯಕ್ತಪಡಿಸಿದ್ದ ಸುಮಲತಾ ಅಂಬರೀಶ್ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಸುಮಲತಾ ಅವರ ಜೊತೆಗೆ ಕೊಪ್ಪಳ ಮಾಜಿ ಸಂಸದ ಶಿವರಾಮೇಗೌಡ, ವಿಜಯಪುರದ ಹರ್ಷಗೌಡ ಶಿವಶರಣ ಪಾಟೀಲ್, ಮತ್ತು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ಎಲ್ಲ ನಾಯಕರನ್ನು ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು.
ಪಕ್ಷ ಸೇರ್ಪಡೆಯಾದ ನಂತರ ಮಾತನಾಡಿದ ಸುಮಲತಾ ಅಂಬರೀಶ್, “ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಸುದಿನ, ಐದು ವರ್ಷಗಳ ಹಿಂದೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ ಎಂದಿಗೂ ಮರೆಯಲ್ಲ. ಅಂಬರೀಶ್ ಬಳಗ ಸಹಕಾರ ಕೊಟ್ಟರೆ, ಬಿಜೆಪಿ ಬಾಹ್ಯ ಬೆಂಬಲ ನೀಡಿ ಸಹಕಾರ ನೀಡಿತ್ತು. ಪ್ರಧಾನಿ ಮೋದಿ ಮೈಸೂರಿಗೆ ಬಂದು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ನನ್ನ ಪರ ಪ್ರಚಾರ ಮಾಡಿದ್ದು ಮರೆಯಲು ಸಾಧ್ಯವಿಲ್ಲ” ಎಂದರು.
“ಐದು ವರ್ಷದ ಈ ಪ್ರಯಾಣದಲ್ಲಿ ಸಾಕಷ್ಟು ಕಲಿತಿದ್ದೇನೆ. 25 ವರ್ಷ ಅಂಬರೀಶ್ ಕಾಂಗ್ರೆಸ್ನಲ್ಲಿದ್ದರು. ಆದರೆ, ಬಿಜೆಪಿ ನಾಯಕರಿಂದ ನನಗೆ ಸಂಸತ್ನಲ್ಲಿ ಸಹಕಾರ ಸಿಕ್ಕಿದೆ. ಅದೇ ನನಗೆ ಮಾರ್ಗದರ್ಶನ ಸಿಕ್ಕಿದೆ. ಮೋದಿ ನನಗೆ ಸ್ಫೂರ್ತಿ. ಅವರ ಪರಿಕಲ್ಪನೆ, ಅವರ ಕನಸು ನೋಡಿ ಬಿಜೆಪಿ ಸೇರುವುದೇ ಉತ್ತಮ ಆಯ್ಕೆ ಎಂದು ನಿರ್ಧಾರ ಮಾಡಿದೆ. “ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಸಹಕಾರ ನೀಡಿದ್ದರು. ಮೈ ಶುಗರ್ ಕಾರ್ಖಾನೆ ಸಮಸ್ಯೆ ಹೇಳಿದಾಗ ದೃಢ ನಿರ್ಧಾರ ಕೈಗೊಂಡು ಪೂರಕ ಕ್ರಮ ವಹಿಸಿದರು. ಬೊಮ್ಮಾಯಿ ಬಂದು ಅನುದಾನ ನೀಡಿ ಕಾರ್ಖಾನೆ ತೆರೆಯುವ ಕೆಲಸ ಮಾಡಿದರು. ಇಂದು ಬೇರೆಯವರು ಕ್ರೆಡಿಟ್ ಪಡೆಯುತ್ತಿದ್ದಾರೆ. ಉದ್ಘಾಟನೆ ಆಗಿದ್ದ ಕಾರ್ಖಾನೆಯನ್ನು ಮತ್ತೆ ಉದ್ಘಾಟನೆ ಮಾಡುತ್ತಿದ್ದಾರೆ. ಇದಕ್ಕೆ ಜನ ಉತ್ತರ ಕೊಡಬೇಕು. ಮೈ ಶುಗರ್ ಸೇರಿ ಮಂಡ್ಯ ಅಭಿವೃದ್ಧಿ ಶ್ರೇಯ ಬಿಜೆಪಿಗೆ ಸಿಗಬೇಕು. ಬಿಜೆಪಿ ಸೇರುತ್ತಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತೋಷದ ವಿಷಯ. ಇಷ್ಟು ದಿನ ಸಹಕಾರ ನೀಡಿದ ಎಲ್ಲರ ಸಹಕಾರ, ಆಶೀರ್ವಾದ ಇರಲಿ.” ಎಂದು ರಾಜಕೀಯ ಹಾದಿಯಲ್ಲಿ ಸಹಕರಿಸಿದ್ದವರಿಗೆ ಧನ್ಯವಾದವನ್ನು ಸಲ್ಲಿಸಿ ಭವಿಷ್ಯದ ರಾಜಕೀಯಕ್ಕೆ ಆಶೀರ್ವಾದ ಕೋರಿದರು.










