ಬೆಂಗಳೂರು: ಹೊಸ ವರ್ಷದ ಆಚರಣೆಗೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿರುವ ಬೆನ್ನಲ್ಲೇ ಮಾದಕ ದಂಧೆಕೋರರ ಮೇಲೆ ಪೊಲೀಸರು ಕಣ್ಣಿಡಲಾಗಿದ್ದು, 8 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ನಗರವನ್ನು ಸಂಪರ್ಕಿಸುವ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಪೊಲೀಸರು ಪರಿಶೀಲನೆ ಮಾಡಲಾಗುತ್ತಿದೆ. ಈ ನಡುವೆ ರೈಲುಗಳ ಮುಖಾಂತರ ನಗರಕ್ಕೆ ಗಾಂಜಾ ಪೂರೈಸುತ್ತಿದ್ದ 5 ಪ್ರಕರಣಗಳಲ್ಲಿ ಎಂಟು ಮಂದಿ ಆರೋಪಿಗಳನ್ನು ರಾಜ್ಯ ರೈಲ್ವೆ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಹಾಗೂ ಆರೋಪಿಗಳಿಂದ ಸುಮಾರು 86 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ರಾಜ್ಯ ರೈಲ್ವೆ ಪೊಲೀಸ್ ಎಸ್‍ಪಿ ಡಾ. ಸೌಮ್ಯಲತಾ ಎಸ್.ಕೆ. ವರದಿ ನೀಡಿದ್ದಾರೆ. ಆರೋಪಿಗಳು ಜಾಖರ್ಂಡ್ ಹಾಗೂ ಒಡಿಶಾ ಮೂಲದವರು ಎಂದು ಗುರುತಿಸಲಾಗಿದೆ. ರಸ್ತೆ ಮಾರ್ಗಗಳ ಮೂಲಕ ಮಾದಕ ಪದಾರ್ಥಗಳನ್ನು ತಂದರೆ ಸಿಕ್ಕಿಬೀಳುವ ಭಯದಿಂದ, ಪೊಲೀಸ್ ಶ್ವಾನಗಳಿಗೂ ವಾಸನೆ ತಿಳಿಯದಂತೆ ಪ್ಯಾಕ್ ಮಾಡಿ ನಗರಕ್ಕೆ ಗಾಂಜಾ ತರುತ್ತಿದ್ದರು. ಮಾದಕ ದಂಧೆಕೋರರ ವಿರುದ್ಧ ಡಿಸೆಂಬರ್ ಮೊದಲ ವಾರದಿಂದಲೇ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ರೈಲ್ವೆ ಪೊಲೀಸರು ಪ್ರಶಾಂತಿ ಎಕ್ಸ್‍ಪ್ರೆಸ್ ಹಾಗೂ ಹಟಿಯಾ ಎಕ್ಸ್‍ಪ್ರೆಸ್ ರೈಲುಗಳಲ್ಲಿ ಹುಡುಕಲು ಶರುಮಾಡಿದ್ದಾರೆ. ಈ ವೇಳೆ ಟ್ರ್ಯಾಲಿ ಬ್ಯಾಗ್‍ಗಳಲ್ಲಿ ಗಾಂಜಾ ತುಂಬಿಸಿ ತರುತ್ತಿರುವುದು ಪತ್ತೆಯಾಗಿದೆ. ಬಂಧಿತರ ವಿಚಾರಣೆ ಮುಂದುವರೆಸಲಾಗಿದ್ದು, ಅವರ ಸಂಪರ್ಕದಲ್ಲಿದ್ದವರ ಕುರಿತು ಮಾಹಿತಿ ತಿಳಿದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.










