ಚಿಕ್ಕಮಗಳೂರು : ಅರಣ್ಯ ಒತ್ತುವರಿ ತೆರವಿಗೆ ಮುಂದಾದ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಎಂ.ಹೆಚ್.ಅಕ್ಷಯ್ ಅವರನ್ನು ಇಂದು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಹಲ್ಲೆ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.

ಉಪವಲಯ ಅರಣ್ಯಾಧಿಕಾರಿ ಹೆಚ್.ಎಂ.ಸುಬ್ರಹ್ಮಣ್ಯ ಮತ್ತು ಅರಣ್ಯ ರಕ್ಷಕ ರಮೇಶ್ ಅವರು ಏ.21 ರಂದು ಬೆಳಿಗ್ಗೆ ಅಡ್ಡಗದ್ದೆ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುವ ವೇಳೆ ಅಸಗೋಡು ಗ್ರಾಮದ ಸರ್ವೆ ನಂ. 125ರ ಹೊನಗೋಡು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಬೇಲಿ ಹಾಕಿರುವುದು ಕಂಡು ಬಂದಿದ್ದು, ಅದನ್ನು ತೆರವುಗೊಳಿಸಲು ಮುಂದಾದ ವೇಳೆ ಸ್ಥಳೀಯರಾದ ತೌಫೀಕ್, ಶರತ್, ಪುನೀತ್, ಹಸನಬ್ಬ ಸೇರಿದಂತೆ ಹಲವರು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆÉ ಎಂದು ಆರೋಪಿಸಿದರು.
ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವವರ ವಿರುದ್ದ ಹರಿಹರಪುರ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆ ಪ್ರಕರಣದಿಂದ ಸರ್ಕಾರಿ ನೌಕರರು ಜೀವ ಬಿಗಿಹಿಡಿದು ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಓಂಕಾರಸ್ವಾಮಿ, ಪದ್ಮರಾಜ್, ದೀಕ್ಷಿತ್, ಸಂತೋಷ್, ರಾಜು ಹಾಜರಿದ್ದರು.










