ಅರವಳಿಕೆ ಚುಚ್ಚುಮದ್ದು ನೀಡುವಾಗ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ಭೀಮ ದಾಳಿ- ಮಲೆನಾಡ ಶಾರ್ಪ್ ಶೂಟರ್ ಸಾವು…

103
firstsuddi

ಹಾಸನ: ಅರವಳಿಕೆ ಮದ್ದು ನೀಡಲು ವೈದ್ಯನ ಜೊತೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಗಾಯಗೊಂಡಿದ್ದ ಕಾಡಾನೆ ಭೀಮ ದಾಳಿ ನಡೆಸಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಆಲೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ವೆಂಕಟೇಶ್ ಮೃತಪಟ್ಟ ಅರಣ್ಯ ಸಿಬ್ಬಂದಿ. ಹಳ್ಳಿಯೂರು ಬಳಿ ಗಾಯಗೊಂಡು ಭೀಮ ಆನೆ ನಿಂತಿತ್ತು. ಅದಕ್ಕೆ ಚಿಕಿತ್ಸೆ ನೀಡಲು ಅರಣ್ಯ ಸಿಬ್ಬಂದಿ ಮುಂದಾಗಿದ್ದರು. ಅರವಳಿಕೆ ಮದ್ದು ನೀಡಲು ವನ್ಯಜೀವಿ ವೈದ್ಯ ವಸೀಂ ಜೊತೆ ವೆಂಕಟೇಶ್ ತೆರಳಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ವೆಂಕಟೇಶ್ ಮೇಲೆ ಆನೆ ದಾಳಿ ನಡೆಸಿತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ವೆಂಕಟೇಶ್ ಅವರು ಮಲೆನಾಡು ಭಾಗದಲ್ಲಿ ಶಾರ್ಪ್ ಶೂಟರ್ ಎಂದೇ ಪ್ರಸಿದ್ಧರಾಗಿದ್ದರು. ಅರವಳಿಕೆ ನೀಡಿ ಹತ್ತಾರು ಆನೆಗಳನ್ನು ಸೆರೆ ಹಿಡಿಯುವಲ್ಲಿ ಇವರು ಎತ್ತಿದ ಕೈ ಆಗಿದ್ದರು. ಹಾಸನ, ಕಳಸ, ಕೊಪ್ಪ, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಕಾಡಾನೆ ಸೇರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೆಂಕಟೇಶ್ ಅವರು ಇದುವರೆಗೂ ಯಾರ ಮೇಲೂ ದಾಳಿ ಮಾಡದ ಭೀಮ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.