ಅರ್ಕಾವತಿ ಪ್ರಕರಣ.. ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂದ ನಳಿನ್ ಕುಮಾರ್ ಕಟೀಲ್.

63
firstsuddi

ರಾಯಚೂರು: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಅಂತಾ ನಾನು ಈ ಮೊದಲು ಹೇಳಿದ್ದೆ, ಈಗಲೂ ಹೇಳುತ್ತೇನೆ. ಲೋಕಾಯುಕ್ತಕ್ಕೆ ಕೊಟ್ಟು ಸಂಪೂರ್ಣ ತನಿಖೆ ಮಾಡಿಸಲಾಗುತ್ತೆ, ಯಾರ್ಯಾರು ನಾಯಕರು ಪ್ರಕರಣದಲ್ಲಿ ಇದ್ದಾರೆ ಅವರ ವಿರುದ್ಧ ಕ್ರಮ ಆಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಹುಮತ ಸರ್ಕಾರ ಇದ್ದಾಗ ಹಗರಣ ಆಗಿತ್ತು. ತಾವು ಸಿಕ್ಕಿ ಬೀಳುತ್ತೇವೆ ಅಂತ ಲೋಕಾಯುಕ್ತವನ್ನು ಮುಚ್ಚಿಸಿದ್ದರು. ಎಸಿಬಿಯನ್ನ ಹುಟ್ಟುಹಾಕಿದರು. ನ್ಯಾ.ಕೆಂಪಣ್ಣ ವರದಿಯನ್ನು ಮುಚ್ಚಿಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದರು. ಜಸ್ಟೀಸ್ ಕೆಂಪಣ್ಣ ಕೊಟ್ಟ ವರದಿ ವಿಧಾನಸಭೆಯಲ್ಲಿ ಸಿಎಂ ಓದಿದ್ದಾರೆ. ಈಗ ಆ ವರದಿ ದಾಖಲಾತಿಗಳನ್ನ ಇಟ್ಟುಕೊಂಡು ತನಿಖೆ ಮಾಡಿಸುತ್ತೇವೆ. ಹಗರಣದಲ್ಲಿದ್ದವರು ಜೈಲಿಗೆ ಹೋಗ್ತಾರೆ ಅಂತ ಕಟೀಲ್ ಹೇಳಿದ್ದಾರೆ.

ಸಿ.ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿ.ಟಿ ರವಿ ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳದ ಒಳಗೆ ಹೋಗಿದ್ರು. ಸಿಟಿ ರವಿ ದೇವಸ್ಥಾನದ ಒಳಗೆ ಹೋಗಿಲ್ಲ, ಇಬ್ಬರಿಗೂ ವ್ಯತ್ಯಾಸ ಇದೆ ಎಂದರು.

ಅಮಿತ್ ಶಾ, ಜನಾರ್ದನ ರೆಡ್ಡಿಯನ್ನು ನೋಡಿಕೊಳ್ಳುತ್ತೇನೆ ಎಂಬ ಹೇಳಿಕೆಗೆ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ವಿಚಾರವಾಗಿ ಮಾತನಾಡಿದ ಕಟೀಲ್, ಇದೆಲ್ಲಾ ತಪ್ಪು ಮಾಹಿತಿ. ರೆಡ್ಡಿ ಪಕ್ಷವನ್ನು ನೋಡಿಕೊಳ್ಳುತ್ತೇನೆಂದು ಅಮಿತ್ ಶಾ ಹೇಳಿಲ್ಲ. ನೀವೇನು ತಲೆಕೆಡಿಸಿಕೊಳ್ಳಬೇಡಿ, ಕೆಲಸ ಮಾಡಿ ಅಂತಷ್ಟೇ ಹೇಳಿದ್ದಾರೆ. ಬದಲಿಗೆ, ರೆಡ್ಡಿ ಪಾರ್ಟಿ ವಿಚಾರ ತಮಗೆ ಬಿಡಿ ಅಂತ ಹೇಳಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.