ಅಸ್ಸಾಂ, ಮೇಘಾಲಯ ಗಡಿ ವಿವಾದ ಅಂತ್ಯ- ಅಮಿತ್ ಶಾ ಸಮ್ಮುಖದಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ…

64

ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವೆ 50 ವರ್ಷಗಳಿಂದ ಬಾಕಿ ಇದ್ದ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಸಿಎಂ ಸಹವರ್ತಿ ಕಾನ್ರಾಡ್ ಕೆ ಸಂಗ್ಮಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಇದರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಅಂತ್ಯಹಾಡಲಾಗಿದೆ.

ದಶಕಗಳ ಕಾಲದ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಸಚಿವಾಲಯದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮೇಘಾಲಯದ ಸರ್ಕಾರದ ಪರವಾಗಿ 11 ಪ್ರತಿನಿಧಿಗಳು ಹಾಗೂ ಅಸ್ಸೋಂ ಪರವಾಗಿ 9 ಪ್ರತಿನಿಧಿಗಳು ಭಾಗಿಯಾಗಿದ್ದರು.

ಪ್ರಸ್ತಾವಿತ ಒಪ್ಪಂದದ ಶಿಫಾರಸುಗಳ ಪ್ರಕಾರ, 36.79 ಚದರ ಕಿ.ಮೀ. ಭೂಪ್ರದೇಶದ ಪೈಕಿ ಅಸ್ಸಾಂ 18.51 ಚದರ ಕಿ.ಮೀ. ಭೂಪ್ರದೇಶ ಪಡೆಯಲಿದೆ. ಉಳಿದ 18.28 ಚದರ ಕಿ.ಮೀ. ಭೂಪ್ರದೇಶವನ್ನು ಮೇಘಾಲಯಕ್ಕೆ ನೀಡಿದೆ.1972ರಲ್ಲಿ ಅಸ್ಸಾಂನಿಂದ ಮೇಘಾಲಯ ಬೇರ್ಪಟ್ಟ ನಂತರ ಈ ಗಡಿ ವಿವಾದ ಹುಟ್ಟುಕೊಂಡಿತು.