ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಸದ್ಗುರು ವಾಸುದೇವ್ ವಿರುದ್ಧ ಎಫ್‍ಐಆರ್…

61
firstsuddi

ಗುವಾಹಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ಜೀಪ್ ಸಫಾರಿ ಮಾಡಿದ ಆರೋಪದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಪ್ರವಾಸಿಗರಿಗಾಗಿ ಶನಿವಾರ ತೆರೆಯಲಾಗಿತ್ತು. ಅಂದು ರಾತ್ರಿ ಸದ್ಗುರು ಜಗ್ಗಿ ವಾಸುದೇವ್ ಉದ್ಯಾನವನದ ಒಳಗೆ ಜೀಪ್ ಚಾಲನೆ ಮಾಡಿದ್ದಾರೆ. ಅವರ ಪಕ್ಕ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಳಿತಿದ್ದರು. ಅಸ್ಸಾಂ ಸಂಪುಟ ಸಚಿವ ಜಯಂತ ಮಲ್ಲ ಮತ್ತಿತರರು ಕೂಡಾ ಜೀಪ್ ನಲ್ಲಿ ರಾತ್ರಿ ಉದ್ಯಾನವನದಲ್ಲಿ ಸಂಚರಿಸಿದ್ದರು.

ಇದೀಗ ಇವರಿಬ್ಬರ ವಿರುದ್ಧ ಉದ್ಯಾನವನದ ಹತ್ತಿರದ ಎರಡು ಗ್ರಾಮಗಳ ಇಬ್ಬರು ನಿವಾಸಿಗಳಾದ ಸೋನೇಶ್ವರ್ ನಾರಾ ಮತ್ತು ಪ್ರವೀಣ್ ಪೆಗು ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬೊಕಾಕಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಫಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ಎಫ್ ಐಆರ್ ನಲ್ಲಿ ದಾಖಲಾಗಿದೆ.

ಉದ್ಯಾನವನದೊಳಗೆ ಜೀಪ್ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಸದ್ಗುರು ಮತ್ತು ಹಿಮಂತ ಬಿಸ್ವಾ ಶರ್ಮಾ ಜೀಪ್ ಚಾಲನೆ ಮಾಡಿದ್ದಾರೆ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಅವರಿಬ್ಬರೂ ಸಾರ್ವಜನಿಕರರೊಂದಿಗೆ ಕ್ಷಮೆ ಕೇಳಬೇಕು. ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಿಮಂತ ಬಿಸ್ವಾ ಶರ್ಮಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಸಾರ್ವಜನಿಕರು ರಾತ್ರಿಯ ಸಮಯದಲ್ಲಿ ನ್ಯಾಷನಲ್ ಪಾರ್ಕ್‌ಗೆ ಭೇಟಿ ನೀಡಬಾರದು ಎಂದು ಯಾವುದೇ ನಿಯಮ ಇಲ್ಲ ಎಂದು ಅವರು ತಿಳಿಸಿದ್ದಾರೆ.