ಶಿವಮೊಗ್ಗ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದಲ್ಲಿ ಸುಮಾರು 12.5 ಕೆಜಿ ತೂಕದ ಮತ್ತು ಬರೋಬ್ಬರಿ 15 ಅಡಿ ಉದ್ದದ ಅಪರೂಪದ ಕಾಳಿಂಗ ಸರ್ಪವೊಂದನ್ನು ರಕ್ಷಣೆ ಮಾಡಲಾಗಿದೆ.
ಕಾಳಿಂಗ ಸರ್ಪವನ್ನು ಹರ್ಪಿಟಾಲಜಿಸ್ಟ್ ಡಾ.ಪಿ.ಗೌರಿ ಶಂಕರ್ ಅವರು ರಕ್ಷಣೆ ಮಾಡಿದ್ದಾರೆ. ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳಾಗಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ. ಥೈಲ್ಯಾಂಡ್‌ನಲ್ಲಿ 18 ಅಡಿಗಳಷ್ಟು ಉದ್ದದ ಹಾವುಗಳಿವೆ. ಆದರೆ ಪ್ರಸ್ತುತ ಆಗುಂಬೆ ಬಳಿ ಪತ್ತೆಯಾಗಿರುವುದು ಭಾರತದಲ್ಲಿ ಅಪರೂಪದ ಹಾವು ಎನ್ನಲಾಗಿದೆ.
ಉಡುಪಿಯ ಹೆಬ್ರಿ ಹತ್ತಿರದ ಸೀತಾ ನದಿ ತೀರದ ನಡಪಾಲ್ ಗ್ರಾಮದಲ್ಲಿ ಹಿಂದೆಂದೂ ಕಂಡಿರದ ಬೃಹತ್ ಗಾತ್ರದ ಕಾಳಿಂಗವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಇದೇ ಭಾನುವಾರ ಅಂತಹ ಒಂದು ದೈತ್ಯ ಆಕಾರದ ಕಾಳಿಂಗ ಸರ್ಪ ಬಂದಾಗ ಡಾ.ಪಿ.ಗೌರಿ ಶಂಕರ್ ನೇತೃತ್ವದ ತಂಡ ತಕ್ಷಣ ರಕ್ಷಣಾ ಸ್ಥಳಕ್ಕೆ ಧಾವಿಸಿ ಕಾಳಿಂಗ ಸರ್ಪಗಳನ್ನು ರಕ್ಷಿಸಿದ್ದಾರೆ. ಅವರು ಈಗಾಗಲೇ 500ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನ ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದು, ಕಾಳಿಂಗದ ಮರಿಗಳನ್ನು ಸುರಕ್ಷಿತವಾಗಿ ಮತ್ತೆ ಕಾಡಿಗೆ ಮರಳಿ ಬಿಟ್ಟಿದ್ದಾರೆ.
ಡಾ.ಪಿ.ಗೌರಿ ಶಂಕರ್ ರವರು ಇಷ್ಟು ವರ್ಷಗಳ ಕಾಲ ಕಾಳಿಂಗಗಳ ರಕ್ಷಣೆ ಮತ್ತು ಅಧ್ಯಯನದಲ್ಲಿ, ಇಲ್ಲಿಯವರೆಗೆ ರಕ್ಷಿಸಿದ ಎಲ್ಲಾ ಕಾಳಿಂಗಗಳಿಗಿಂತ ಇದು ಭಿನ್ನವಾಗಿದೆ. ಸಾಮಾನ್ಯವಾಗಿ, ಕಾಳಿಂಗಗಳ ಸರಾಸರಿ ಹೆಣ್ಣು ಕಾಳಿಂಗ ತೂಕ 2 ರಿಂದ 3.5 ರಷ್ಟು ಹಾಗೂ ಗಂಡು ಕಾಳಿಂಗ 3.5 ರಿಂದ 6 ಕೆಜಿಯಷ್ಟಿರುತ್ತದೆ, ನಾನು ಸುಮಾರು 7 ಕೆಜಿ ವರೆಗಿನ ಕಾಳಿಂಗಗಳನ್ನೂ ರಕ್ಷಿಸಿದ್ದೇನೆ, ಆದರೆ ಇಂದು, ನಾನು ನಡಪಾಲ್ ನಲ್ಲಿ ರಕ್ಷಿಸಿದ ಈ ಗಂಡು ಕಾಳಿಂಗವು 12.5 ಕೆಜಿ ತೂಕವನ್ನು ಹೊಂದಿದ್ದು, ನಾನು ರಕ್ಷಿಸಿದ ಕಾಳಿಂಗಗಳಲ್ಲೇ ಅತ್ಯಂತ ಭಾರವಾದದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.










