ಆರ್‌ಎಸ್ಎಸ್ ಹಿರಿಯ ನಾಯಕ ಮದನ್ ದಾಸ್ ದೇವಿ ನಿಧನ…

51
firstsuddi

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ ಮದನ್ ದಾಸ್ ದೇವಿ ಅವರು ಇಂದು ಬೆಳಗ್ಗೆ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ದೀರ್ಘಕಾಲದ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮದನ್ ದಾಸ್ ದೇವಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ದೇವಿ ಅವರ ಪಾರ್ಥೀವ ಶರೀರವನ್ನು ಆರ್‌ಎಸ್‌ಎಸ್ ಸ್ಥಳೀಯ ಪ್ರಧಾನ ಕಛೇರಿ ಕೇಶವ ಕೃಪಾದಲ್ಲಿ ಇಂದು ಮಧ್ಯಾಹ್ನ 1.30ರಿಂದ ಸಂಜೆ 4ರವರೆಗೆ ಅಂತಿಮ ದರ್ಶನಕ್ಕೆ ಇರಿಸಲಾಗುವುದು ಮತ್ತು ನಾಳೆ ಅಂತಿಮ ವಿಧಿವಿಧಾನಗಳಿಗಾಗಿ ಪುಣೆಗೆ ಕೊಂಡೊಯ್ಯಲಾಗುವುದು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರಲ್ಲಿ ನಾಯಕತ್ವ ಕೌಶಲ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಮದನ್ ದಾಸ್ ದೇವಿ ಪ್ರಮುಖ ಪಾತ್ರ ವಹಿಸಿದ್ದರು. ಪೂರ್ಣಾವಧಿ ಪ್ರಚಾರಕ (ಪ್ರಚಾರಕ) ರಾಗಿದ್ದ ದೇವಿ ಅವರು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ಆರ್‌ಎಸ್‌ಎಸ್ ವಿದ್ಯಾರ್ಥಿ ವಿಭಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಮದನ್ ದಾಸ್ ದೇವಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ‘ಶ್ರೀ ಮದನ್ ದಾಸ್ ದೇವಿ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರು ತಮ್ಮ ಇಡೀ ಜೀವನವನ್ನು ದೇಶ ಸೇವೆಗೆ ಮುಡಿಪಾಗಿಟ್ಟಿದ್ದರು. ನಾನು ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದಲ್ಲದೆ, ಅವರಿಂದ ಅನೇಕ ವಿಷಯಗಳನ್ನು ಕಲಿಯುವ ಅವಕಾಶವೂ ಸಿಕ್ಕಿತು. ಈ ದುಃಖದ ಸಮಯದಲ್ಲಿ ಎಲ್ಲಾ ಕಾರ್ಯಕರ್ತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ದೇವರು ದುಖಃ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ’ ಎಂದಿದ್ದಾರೆ.

ಮದನ್ ದಾಸ್ ದೇವಿ ಅವರ ನಿಧನಕ್ಕೆ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ.