ಗಾಜಿಪುರ: ಲಖನೌದ ಚಿನ್‍ಹಾಟ್‍ನಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‍ನಲ್ಲಿ ಕಳ್ಳತನ ಮಾಡಿದ್ದ ಗ್ಯಾಂಗ್‍ನ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಇವರನ್ನು ಸೋಬಿಂದ್ ಕುಮಾರ್ ಮತ್ತು ಸನ್ನಿ ದಯಾಲ್ ಎಂದು ಗುರುತಿಸಲಾಗಿದೆ. ಲಖನೌ ಮತ್ತು ಘಾಜಿಪುರದಲ್ಲಿ ಈ ಘಟನೆ ನಡೆದಿದೆ. ಇಬ್ಬರೂ ದುಷ್ಕರ್ಮಿಗಳು ಬಿಹಾರದ ಮುಂಗೇರ್ ನಿವಾಸಿಗಳು ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ. ಲಖನೌ ಬ್ಯಾಂಕ್ ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳು ಕಿಸಾನ್ ಪಥ್ ಮೂಲಕ ಸಾಗುತ್ತಿರುವ ಬಗ್ಗೆ ಯುಪಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಸೋಮವಾರ ರಾತ್ರಿ, ಚಿನ್ಹತ್ ಪೊಲೀಸ್ ಮತ್ತು ಅಪರಾಧ ವಿಭಾಗದ ತಂಡವು ಮುತ್ತಿಗೆ ಹಾಕಿ ದುಷ್ಕರ್ಮಿಗಳನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಇದಕ್ಕೆ ಸಿಟ್ಟಿಗೆದ್ದ ಪೊಲೀಸರು ಪ್ರತೀಕಾರವಾಗಿ ಹಾರಿಸಿದ ಗುಂಡಿಗೆ ದುಷ್ಕರ್ಮಿಯೊಬ್ಬ ಗಾಯಗೊಂಡಿದ್ದು, ಅವರನ್ನು ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು. ಆರೋಪಿಯನ್ನು ಸೋಬಿಂದ್ ಕುಮಾರ್ ಎಂದು ಗುರುತಿಸಲಾಗಿದೆ. ಈತನಿಂದ 25,000 ರೂ. ಹಾಗೂ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಬಿಂದ್ ಬಿಹಾರದ ಮುಂಗೇರ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಕಡೆ ಬ್ಯಾಂಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಸನ್ನಿ ದಯಾಳ್ ನನ್ನು ಮಂಗಳವಾರ ಮುಂಜಾನೆ ಗಾಜಿಪುರ ಪೊಲೀಸರು ಎನ್ ಕೌಂಟರ್ ಮಾಡಲಾಗಿದೆ. ತಪಾಸಣೆ ವೇಳೆ ಇಬ್ಬರು ಶಂಕಿತರು ಬೈಕ್‍ನಲ್ಲಿ ಮುಖವನ್ನು ಮರೆ ಮಾಚಿಕೊಂಡು ಹೋಗುತ್ತಿರುವುದು ಬಾರಾ ಔಟ್‌ಪೋಸ್ಟ್ ಬಳಿ ಕಂಡುಬಂದಿತ್ತು. ಈ ವೇಳೆ, ಅವರನ್ನು ತಡೆಯಲು ಪ್ರಯತ್ನಿಸಲಾಗಿದೆ, ಆದರೆ ಇಬ್ಬರೂ ಪೊಲೀಸರ ಮೇಲೆಯೇ ಬೈಕ್ ಹತ್ತಿಸಲು ಪ್ರಯತ್ನ ಮಾಡಿದ್ದಾರೆ. ಆ ಬಳಿಕ ಅವರು ಬಿಹಾರ ಗಡಿಯತ್ತ ಅತಿವೇಗದಲ್ಲಿ ಎಸ್ಕೇಪ್ ಆಗುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಚೇಸ್ ಮಾಡಿದರು, ಆಗ ಇಬ್ಬರೂ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತೀಕಾರವಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸನ್ನಿ ದಯಾಳ್ ಸಾವನ್ನಪ್ಪಿದ್ದಾನೆ. ಈ ವೇಳೆ ಸನ್ನಿ ದಯಾಳ್ ನಿಂದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.










