ಇಂದು ಬೆಂಗಳೂರಿಗೆ ಪ್ರಧಾನಿ – ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಮೋದಿ, ಇಲ್ಲಿದೆ ಮಾಹಿತಿ…

78
firstsuddi

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಸ್ವಾಗತಕ್ಕೆ ರಾಜಧಾನಿ ಸಿದ್ಧಗೊಂಡಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಮೋದಿ 20 ಗಂಟೆಗಳ ಕಾಲ ರಾಜ್ಯದಲ್ಲಿ ಇರಲಿದ್ದು, ಈ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಯೋಗ ಸೇರಿ 10 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮೋದಿ ಕಾರ್ಯಕ್ರಮಗಳ ವಿವರ : ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೆದುಳಿನ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ನಂತರ ಐಐಎಸ್ ಸಿಯಲ್ಲಿ ಬಾಗ್ಚಿ-ಪಾರ್ಥಸಾರಥಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಅಡಿಪಾಯವನ್ನು ಹಾಕುತ್ತಾರೆ. ಮಧ್ಯಾಹ್ನ 1.45 ಕ್ಕೆ ಪ್ರಧಾನಿಯವರು (ಬೇಸ್) ಕ್ಯಾಂಪಸ್ ಗೆ ತೆರಳಿ, ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ, ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಿದ 150 ಐಟಿಐ ಕಾಲೇಜುಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಮಧ್ಯಾಹ್ನ 2.45 ಕ್ಕೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮೈಸೂರಿಗೆ ತೆರಳಿದ್ದಾರೆ. ನಾಳೆ ಸಂಜೆ 5.30 ಕ್ಕೆ ಮೈಸೂರಿನ ಮಹಾರಾಜ ಮೈದಾನಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾತ್ರಿ 7 ಗಂಟೆಗೆ ಶ್ರೀ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ರಾತ್ರಿ 7.50 ಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.

ಜೂನ್ 21 ರಂದು ಮಂಗಳವಾರ ಬೆಳಗ್ಗೆ 6.30 ಕ್ಕೆ ಪ್ರಧಾನಿ ಮೋದಿಯವರು ಮೈಸೂರು ಅರಮನೆಯ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗಪಟುಗಳೊಂದಿಗೆ ಬೆರೆತು ಯೋಗ ಮಾಡಲಿದ್ದಾರೆ. ಬೆಳಗ್ಗೆ 8.10 ಕ್ಕೆ ವಸ್ತುಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.20 ಕ್ಕೆ ಮೈಸೂರು ಅರಮನೆ ಆವರಣದಿಂದ ನಿರ್ಗಮಿಸಿ, ಬೆಳಗ್ಗೆ 9.45ಕ್ಕೆ ಮೈಸೂರಿನ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಲಿದ್ದಾರೆ.

ಇನ್ನೂ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವ ಹಿನ್ನೆಲೆ ನಗರದ ಹಲವು ರಸ್ತೆಗಳಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ನಗರದ ಹಲವು ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ನಿಷೇಧ, ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್ ವರೆಗೆ ನಿಷೇಧ, ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ನಿಷೇಧ, ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ ಸಂಚಾರ ನಿಷೇಧ, ತುಮಕೂರು ರಸ್ತೆಯ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ.

ಪರ್ಯಾಯ ರಸ್ತೆಗಳು ಎಲ್ಲಿ? : ಮಾಗಡಿ ಮುಖ್ಯ ರಸ್ತೆ ಮೂಲಕ ನೈಸ್ ರಸ್ತೆಯ ಮುಖಾಂತರ, ಉತ್ತರಹಳ್ಳಿ ಮುಖ್ಯ ರಸ್ತೆ, ಹೊಸಕೋಟೆ ಟೋಲ್ ನಿಂದ ಬೂದಿಗೆರೆ ಕ್ರಾಸ್ ಮೂಲಕ ಬೆಂಗಳೂರು ನಗರದ ಕಡೆಗೆ ಅವಕಾಶವಿದೆ. ನೈಸ್ ರಸ್ತೆ ಮೂಲಕ ತುಮಕೂರು ರಸ್ತೆ, ಮೈಸೂರು ರಸ್ತೆ ಕಡೆಯೂ ಅವಕಾಶ ಕಲ್ಪಿಸಲಾಗಿದೆ.