ನವದೆಹಲಿ : ಇನ್ಮುಂದೆ ಮುಕ್ತ ಮಾರುಕಟ್ಟೆಯಲ್ಲಿ ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಭ್ಯವಾಗಲಿವೆ. ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮಾಂಡವೀಯಾ ಅವರು ಕೆಲವು ಷರತ್ತುಗಳೊಂದಿಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ(ಡಿಸಿಜಿಐ) ಕೊವಾಕ್ಸಿನ್ ಮತ್ತು ಕೊವಿಶೀಲ್ಡ್ ಗೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ವಯಸ್ಕ ವ್ಯಕ್ತಿಗಳಿಗೆ ಬಳಕೆ ಮಾಡಲು ಮಾತ್ರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಡಿಸಿಜಿಐನಿಂದ ಅನುಮೋದನೆ ಸಿಕ್ಕಿದ್ದು, ಜನರು ಇನ್ಮುಂದೆ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಂದ ಕೋವಿಡ್ ವ್ಯಾಕ್ಸಿನ್ ಖರೀದಿ ಮಾಡಬಹುದಾಗಿದೆ. ಕೋವಿಡ್ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಔಷಧಾಲಯಗಳು ಆರು ತಿಂಗಳ ಡೇಟಾ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾಗೆ ನೀಡಬೇಕು.
ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು (ಎಸ್ಇಸಿ) ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲು ಈಗಾಗಲೇ ಒಪ್ಪಿಗೆ ನೀಡಿದ್ದು, ಇದನ್ನು ಆಧರಿಸಿ ಲಸಿಕೆ ತಯಾರಿಕೆ ಕಂಪನಿಗಳಾದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೊಟೆಕ್ ಡಿಸಿಜಿಐಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದವು. ಇದೀಗ 2019ರ ಹೊಸ ಔಷಧ ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮದ ಅಡಿಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ.










