ಇಬ್ಬರು ಅಂತರರಾಜ್ಯ ಸರಗಳ್ಳರ ಬಂಧನ…

65
firstsuddi

ಬೆಂಗಳೂರು: ಇಬ್ಬರು ಅಂತರರಾಜ್ಯ ಸರಗಳ್ಳರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಬಾಷಾ(34), ಶೇಕ್ ಅಯೂಬ್(32) ಬಂಧಿತರು. ಬಂಧಿತರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್​​ಗಳನ್ನು ವಶಕ್ಕೆ ಪಡೆಯಲಾಗಿದೆ.

ಸೈಯದ್ ಆಂಧ್ರದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮಿಸ್ಟರ್ ಆಂಧ್ರ ಎಂದೇ ಬಿರುದು ಪಡೆದುಕೊಂಡಿದ್ದ ಯುವಕ. ಸುಲಭವಾಗಿ ಹಣ ಸಂಪಾದನೆ ಮಾಡಲು ವಾಮ ಮಾರ್ಗ ತುಳಿದು ಕುಖ್ಯಾತಿ ಪಡೆಯುವ ಕೆಲಸ ಮಾಡಿದ್ದಾನೆ.

ಆಂಧ್ರಪ್ರದೇಶ ಮೂಲದ ಕಳ್ಳರು ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ನಂತರ ಇಲ್ಲಿ ಬೈಕ್ ಕಳ್ಳತನ ಮಾಡಿ, ಕದ್ದ ಬೈಕ್‌ನಲ್ಲೇ ಸರಗಳ್ಳತನ ಮಾಡುತ್ತಿದ್ದರು. ಆಮೇಲೆ ಬೈಕ್ ಬಿಟ್ಟು ಆಟೋ ಮೂಲಕ ಕೆ.ಆರ್ ಪುರಂಗೆ ಹೋಗಿ ಅಲ್ಲಿಂದ ಬಸ್ ಮೂಲಕ ಮತ್ತೆ ಆಂಧ್ರಕ್ಕೆ ತಲುಪುತ್ತಿದ್ದರು. ಈ ಖದೀಮರು ಸರಗಳ್ಳತನ ಮಾಡಿದ ಕೂಡಲೇ ಬಟ್ಟೆ ಬದಲಿಸ್ತಿದ್ದರಂತೆ. ಸಿಸಿಟಿವಿಯಲ್ಲಿ ತಮ್ಮ ಮುಖ ತಿಳಿಯಬಾರದು, ಪೊಲೀಸರು ನಮ್ಮನ್ನು ಹಿಡಿಯಬಾರದೆಂದು ನಾನಾ ರೀತಿಯ ತಯಾರಿ ಮಾಡಿಕೊಂಡಿದ್ದರು.

ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಗಿರಿನಗರ ಪೊಲೀಸರಿಗೆ, ಸಿಸಿಟಿವಿ ಪರಿಶೀಲಿಸಿದಾಗ ಕದ್ದ ಬೈಕ್ ಪತ್ತೆಯಾಗಿತ್ತು. ಬೈಕ್ ಬಿಟ್ಟು ಹೋದವನು ಮತ್ತೆ ಬರ್ತಾನೆ ಎಂದು ಪೊಲೀಸರು ಬೈಕ್ ಗೆ ಜಿಪಿಎಸ್ ಅಳವಡಿಸಿದ್ದರು. ಪ್ರತಿದಿನ ಜಿಪಿಎಸ್ ಮೇಲೆ ನಿಗಾ ವಹಿಸಿದ್ದರು. 20 ದಿನಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಕದ್ದ ಬೈಕ್‌ನಲ್ಲೇ ಫೀಲ್ಡಿಗಿಳಿದಿದ್ದರು. ಕೂಡಲೇ ಜಿಪಿಎಸ್ ಟ್ರ್ಯಾಕ್ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.