ಈದ್ಗಾ ಮೈದಾನ ವಿವಾದ – ಇಂದು ಚಾಮರಾಜಪೇಟೆ ಬಂದ್, ಬಿಗಿ ಪೊಲೀಸ್ ಬಂದೋಬಸ್ತ್.

66
firstsuddi

ಬೆಂಗಳೂರು : ಈದ್ಗಾ ಮೈದಾನ ಕಳೆದ ಕೆಲವು ದಿನಗಳಿಂದ ವಿವಾದದಿಂದ ಸುದ್ದಿ ಆಗ್ತಿದೆ. ಇದೀಗ ಬಂದ್ ವರೆಗೆ ತಲುಪಿದೆ. ಇಂದು ಚಾಮರಾಜಪೇಟೆ ನಾಗರಿಕ ಒಕ್ಕೂಟ, ಶ್ರೀರಾಮಸೇನೆ, ಹಿಂದೂ ಜನಜಾಗೃತಿ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.

ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಲಾಗಿದೆ. 2 ಡಿಸಿಪಿ, 10 ಎಸಿಪಿ, 20 ಇನ್ಸ್ ಪೆಕ್ಟರ್, 120 ಪಿಎಸ್ ಐ, 500ಕ್ಕೂ ಹೆಚ್ಚು ಜನ ಪೊಲೀಸ್ ಕಾನ್ಸ್‌ಟೇಬಲ್ ಗಳನ್ನು ನಿಯೋಜಿಸಲಾಗಿದೆ.

ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಬಂದ್ ಇರಲಿದ್ದು, ಚಾಮರಾಜಪೇಟೆಯಲ್ಲಿ ಅಂಗಡಿ-ಮುಂಗಟ್ಟು, ಬ್ಯಾಂಕ್, ಶಾಲಾ-ಕಾಲೇಜುಗಳ ಬಂದ್ ಗೆ ಒಕ್ಕೂಟ ಮನವಿ ಮಾಡಿಕೊಂಡಿದೆ. ನಿನ್ನೆ ಕರಪತ್ರ ಹಂಚಿಕೆ ಮಾಡುವ ಮೂಲಕ ಬಂದ್ ಬೆಂಬಲಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಚಾಮರಾಜಪೇಟೆ ಬಂದ್ ಹಿನ್ನೆಲೆ ಕೆಲವು ಖಾಸಗಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬಂದ್ ಬಳಿಕ ಸರ್ಕಾರದ ನಡೆ ಗಮನಿಸಿ ಮುಂದಿನ ಹೆಜ್ಜೆ ಇಡಲು ಒಕ್ಕೂಟ ನಿರ್ಧರಿಸಿದೆ.

ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಬೇಡಿಕೆ ಏನು? : ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು, ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು, ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣಕ್ಕೆ ಒತ್ತಾಯ, ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ ಗೆ ವಹಿಸಬಾರದು, ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯ.