ಕೀವ್ : ರಷ್ಯಾದ ಆಕ್ರಮಣದ ನಂತರದ ಮೊದಲ ಯುದ್ಧಾಪರಾಧಗಳ ವಿಚಾರಣೆಯಲ್ಲಿ ಉಕ್ರೇನ್ ನಾಗರಿಕನನ್ನು ಕೊಂದ ಆರೋಪದ ಮೇಲೆ 21 ವರ್ಷದ ರಷ್ಯಾದ ಸೈನಿಕನಿಗೆ ಉಕ್ರೇನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಾರ್ಜೆಂಟ್ ವಾಡಿಮ್ ಶಿಶಿಮರಿನ್ ಶಿಕ್ಷೆಗೊಳಗಾದ ರಷ್ಯಾ ಯೋಧ. ಉಕ್ರೇನ್ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ರಷ್ಯಾ ಯೋಧ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಮೇಲಾಧಿಕಾರಿ ಆದೇಶಿಸಿದ ನಂತರ ನಾಗರಿಕನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಹತನಾದ ಉಕ್ರೇನಿಯನ್ ವ್ಯಕ್ತಿ, ರಷ್ಯಾ ಪಡೆಗಳು ಇರುವ ಜಾಗದ ಬಗ್ಗೆ ಉಕ್ರೇನಿಯನ್ ಪಡೆಗಳಿಗೆ ಮಾಹಿತಿ ನೀಡುತ್ತಿದ್ದ.
ಯುದ್ಧದ ಪರಿಣಾಮಗಳು ಭೀಕರವಾಗಿ ಪರಿಣಮಿಸಿದ್ದು ಆಹಾರದ ಬೆಲೆಗಳು, ಜನರ ಪಲಾಯನ ದಾಖಲೆ ಮಟ್ಟ ತಲುಪಿದೆ. ಇನ್ನೂ ಯುದ್ಧದ ಮಧ್ಯೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ, ತನ್ನ ದೇಶದ ಮೇಲೆ ಸತತ ಮೂರು ತಿಂಗಳಿಂದ ಯುದ್ಧ ನಡೆಸುತ್ತಿರುವ ರಷ್ಯಾದ ವಿರುದ್ಧ ಎಲ್ಲ ರಾಷ್ಟ್ರಗಳು ಕಠಿಣ ನಿರ್ಬಂಧಗಳನ್ನು ಹೇರಬೇಕು ಎಂದು ವಿಶ್ವ ರಾಷ್ಟ್ರಗಳನ್ನು ಕೋರಿದ್ದಾರೆ.










