ಉಡುಪಿ : ಇಂದಿನಿಂದ ಜೂನ್.7 ರ ವರೆಗೆ ಜಿಲ್ಲೆಯಲ್ಲಿ ಯಾವುದೇ ಮದುವೆಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ನೀಡಿದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ಹರಡುವ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದುವೆ, ಮೆಹಂದಿ ಹಾಗೂ ವಿವಿಧ ಸಮಾರಂಭಗಳು ಹಾಗೂ ಆಚರಣೆಗಳ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವ ಹಿನ್ನಲೆಯಲ್ಲಿ ಸೋಂಕು ಹರಡುವ ಅಪಾಯವು ಹೆಚ್ಚಿರುತ್ತದೆ.ಆದ್ದರಿಂದ ಮದುವೆ ಸಮಾರಂಭಗಳನ್ನು ನಡೆಸಲು ಈಗಾಗಲೇ ನೀಡಲಾಗಿರುವ ಅನುಮತಿ ಪ್ರಕರಣಗಳಲ್ಲಿ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಸೇರಿದಂತೆ 40 ಜನರನ್ನು ಒಳಗೊಂಡು ನಡೆಸಲು ಅನುಮತಿಸಲಾಗಿದ್ದು, ಇಂದಿನಿಂದ ಜೂನ್.7ರ ತನಕ ಯಾವುದೇ ಮದುವೆಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.










