ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ…

62
firstsuddi

ಶಿವಮೊಗ್ಗ: ಕಳೆದ ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದಾಸನಕೂಡಿಗೆ ಗ್ರಾಮದಲ್ಲಿ ನಡೆದಿದೆ.

ಶಮಿತಾ ಬಿ.ಯು (24) ಮೃತ ದುರ್ಧೈವಿ. ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜಳ ಗ್ರಾಮದ ಶಮಿತಾ 2023ರ ಮಾರ್ಚ್‍ನಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್ ಜೊತೆ ವಿವಾಹವಾಗಿದ್ದರು. ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್ ತೆರಳಿದ್ದರು.

ಮನೆಯಲ್ಲಿ ಪತಿಯ ತಂದೆ, ತಾಯಿ ಇದ್ದರು. ಈ ವೇಳೆ ರಾತ್ರಿ ಮಲಗಲು ಮನೆಯ ಉಪ್ಪರಿಗೆಯ ಕೊಠಡಿಗೆ ತೆರಳಿದ್ದ ಶಮಿತಾ ಬೆಳಗ್ಗೆ ಬಹಳ ಹೊತ್ತಾದರೂ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ

ಯುವತಿಯ ಪೋಷಕರು ಆಗಮಿಸಿದ ನಂತರ ಬಾಗಿಲು ಒಡೆಯಲಾಗಿದೆ. ಮೃತದೇಹದ ಬಳಿ ಡೆತ್ ನೋಟ್ ಲಭ್ಯವಾಗಿದೆ. ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ. ಇನ್ನು ಮೃತದೇಹವನ್ನು ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಹಶೀಲ್ದಾರ್ ಜಕ್ಕನ್ ಗೌಡರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.

ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.