ನವದೆಹಲಿ : ನ್ಯಾಶನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ಎಸ್ಇ)ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ದೆಹಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಚಿತ್ರಾ ರಾಮಕೃಷ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಸಂಸ್ಥೆಯು ತನ್ನ ಕಸ್ಟಡಿಯನ್ನು ಇನ್ನು ಮುಂದೆ ಕೇಳುವಂತಿಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ ಸಿಬಿಐ ಇದನ್ನು ವಿರೋಧಿಸಿದ್ದು, ಆಕೆ ಪ್ರಭಾವಿ ವ್ಯಕ್ತಿಯಾಗಿದ್ದು, ವಿದೇಶಿ ಭೇಟಿಗಳು ಮತ್ತು ಪ್ರಕರಣದ ಇತರ ಅಂಶಗಳ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆದ್ದರಿಂದ ನಾವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕೆಂದು ಬಯಸುತ್ತೇವೆ ಎಂದು ವಾದಿಸಿತು. ರಾಮಕೃಷ್ಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ವೇಳೆ, ಅವರಿಗೆ ಮನೆಯ ಆಹಾರ ಒದಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆರೋಪಿ ಪರ ವಕೀಲರು ಕೇಳಿಕೊಂಡರು. ನ್ಯಾಯಾಂಗ ಬಂಧನದಲ್ಲಿರುವವರಿಗೆ ನೀಡುವ ಆಹಾರವೂ ಉತ್ತಮವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಬಂಧಿತರಿಗೆ ಪ್ರಾರ್ಥನಾ ಪುಸ್ತಕ ಮತ್ತು ಮಾಸ್ಕ್ ಗೆ ಅನುಮತಿ ನೀಡಲು ಕೇಳಲಾಯಿತು. ಅದಕ್ಕೆ ನ್ಯಾಯಾಧೀಶರು, ಅವರು ವಿಐಪಿ ಅಲ್ಲ. ವಿಐಪಿ ಕೈದಿಗಳಿಗೆ ಎಲ್ಲವೂ ಬೇಕು. ನಂತರ ಪ್ರತಿ ನಿಯಮವನ್ನೂ ಬದಲಾಯಿಸಬೇಕು. ಪ್ರತಿಯೊಬ್ಬ ಕೈದಿಯೂ ಒಂದೇ ಎಂದು ಸ್ಪಷ್ಟಪಡಿಸಿದ್ದಾರೆ.
2013ರಿಂದ 2016ರವರೆಗೆ ಎನ್ಎಸ್ಇ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರಾ, ಹಿಮಾಲಯದಲ್ಲಿರುವ ಒಬ್ಬ ಯೋಗಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎನ್ಎಸ್ಇಗೆ ಸಂಬಂಧಿಸಿದ ಹಲವು ಗೌಪ್ಯ ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.










