ಬೆಂಗಳೂರು: ರಾಜ್ಯದಲ್ಲಿ 2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಅಂತಿಮಗೊಳಿಸಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿಕೆ ನೀಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ 22ರ ವರೆಗೆ ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 25 ರಿಂದ ಜೂನ್ 06ರ ವರೆಗೆ ನಡೆಯಲಿವೆ ಎಂದು ಎಂದು ಮಾಹಿತಿ ನೀಡಿದ್ದಾರೆ.
ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಪಿಯುಸಿಗೆ 1124 ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 8,96,271 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಒಟ್ಟು 2747 ಪರೀಕ್ಷಾ ಕೇಂದ್ರಗಳು ಇರಲಿದೆ.
ಕಳೆದ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ನ್ನು ಏಪ್ರಿಲ್ ಕೊನೆಯ ವಾರದಲ್ಲಿ ನಡೆಸುತ್ತೇವೆ ಎಂದರು.
ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಅವಕಾಶ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಸಮವಸ್ತ್ರ ನಿಯಮ ಪಾಲನೆ ಮಾಡಲಾಗುತ್ತದೆ. ಅಡ್ವಕೇಟ್ ಜನರಲ್ ಅವರ ಸಲಹೆ ಪಡೆದು ಹಿಜಾಬ್ ವಿಚಾರ ನಿರ್ಧರಿಸಲಾಗುತ್ತದೆ ಎಂದರು.










