ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಘೋಷಣೆ ಮಾಡಿದರು.
ಶಿಕ್ಷಣ ಇಲಾಖೆ ಇದುವರೆಗೆ ಎರಡು ಪರೀಕ್ಷೆಗಳನ್ನು ನಡೆಸುತಿತ್ತು. ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನ ಹೆಚ್ಚಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೇಲ್ ಅಥವಾ ಕಡಿಮೆ ಅಂಕ ಪಡೆದವರು 3 ಬಾರಿ ಪರೀಕ್ಷೆ ಬರೆಯಬಹುದು. ಈ ಪರೀಕ್ಷೆಗಳ ವೇಳಾಪಟ್ಟಿಯನ್ನೂ ಇಲಾಖೆ ಬಿಡುಗಡೆ ಮಾಡಿದೆ. ಹೊಸ ನಿಯಮದ ಪ್ರಕಾರ ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದರೂ ಮುಂದಿನ ತರಗತಿಗಳಿಗೆ ಹೋಗಲು ಅವಕಾಶ ಕಲ್ಪಿಸಲಾಗುವುದು ಎಂದು ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ವೇಳಾಪಟ್ಟಿ ಇಂತಿದೆ:-
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿ:
• ಪರೀಕ್ಷೆ-1: ಮಾರ್ಚ್ 1ರಿಂದ ಮಾರ್ಚ್ 25.
• ಪರೀಕ್ಷೆ-2: ಮೇ 15ರಿಂದ ಜೂನ್ 5.
• ಪರೀಕ್ಷೆ-3: ಜುಲೈ 12ರಿಂದ ಜುಲೈ 30.
10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿ:
• ಪರೀಕ್ಷೆ-1: ಮಾರ್ಚ್ 30ರಿಂದ ಏಪ್ರಿಲ್ 15.
• ಪರೀಕ್ಷೆ-2: ಜೂನ್ 12ರಿಂದ ಜೂನ್ 19.
• ಪರೀಕ್ಷೆ-3: ಜುಲೈ 29ರಿಂದ ಆಗಸ್ಟ್ 5.
ಇಷ್ಟು ದಿನ ವಾರಕ್ಕೆ ಒಂದು ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿತ್ತು. ಈಗ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲು ತೀರ್ಮಾನ ಮಾಡಿದ್ದೇವೆ. ಸುಮಾರು 58 ಲಕ್ಷ ಮಕ್ಕಳಿಗೆ ಇದರಿಂದ ಅನುಕೂಲ ಆಗಲಿದೆ. ಈ ಯೋಜನೆಗೆ ಅಂದಾಜು 280 ಕೋಟಿ ರೂ. ವೆಚ್ಚ ಆಗಲಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ಬೋಧಕ ಸಿಬ್ಬಂದಿ ಕೊರತೆ ಇದೆ. ಇದನ್ನು ಮನಗಂಡ ಸಿಎಂ ಸಿದ್ದರಾಮಯ್ಯ ಅವರು ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಿದ್ದು, ಇನ್ನೆರಡು ದಿನಗಳಲ್ಲಿ 10,000 ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.










