ಅಬುಧಾಬಿ : ಸೆ. 19ರಿಂದ ಆರಂಭವಾಗಲಿರುವ ಐಪಿಎಲ್-2020ರ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಆಡಲಿವೆ. ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮೊದಲ ಪಂದ್ಯದಲ್ಲಿ ಆರ್‍ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಬಿಸಿಸಿಐನಿಂದ ಬಿಡುಗಡೆಯಾಗಿರುವ ವೇಳಾಪಟ್ಟಿ ಎಲ್ಲಾ ಅನುಮಾನಗಳಿಗೂ ತೆರೆ ಎಳೆದಿದೆ. ಐಪಿಎಲ್ ಪಂದ್ಯ ಸೆ. 19ರಿಂದ ಆರಂಭವಾಗಿ ನವೆಂಬರ್. 3ರ ವರೆಗೆ ನಡೆಯಲಿದ್ದು, ಒಟ್ಟು 56 ಪಂದ್ಯಗಳು ನಡೆಯಲಿವೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯ ಮಹಾಮಾರಿ ಕೊರೊನಾ ಸೋಂಕಿನಿಂದ ಮುಂದೂಡಲ್ಪಟ್ಟಿತ್ತು. ಬಳಿಕ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ, ಬಿಸಿಸಿಐ ಐಪಿಎಲ್ ಪಂದ್ಯವನ್ನು ಯುಎಇಯಲ್ಲಿ ನಡೆಸಲು ನಿರ್ಧಾರ ಮಾಡಿತ್ತು. ಅದರಂತೆ ಈಗಾ ಎಲ್ಲಾ ತಂಡಗಳು ಯುಎಇಗೆ ತಲುಪಿ ಅಭ್ಯಾಸ ಪಂದ್ಯಗಳನ್ನು ಆರಂಭಿಸಿದ್ದಾರೆ. ಅಲ್ಲದೇ ಕಳೆದ ತಿಂಗಳಿನಲ್ಲೇ ಬಿಡುಗಡೆಯಾಗಬೇಕಿದ್ದ ಐಪಿಎಲ್ ವೇಳಾಪಟ್ಟಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ತಡವಾಗಿ ಬಿಡುಗಡೆಯಾಗಿದೆ.











